ವಿಷಯಕ್ಕೆ ಹೋಗಿ

ನ್ಯೂ ಹೊರೈಜನ್: ಸಕ್ರಿಯ ಲೋಕದ ರಹಸ್ಯಗಳು

ಪ್ಲೂಟೊವನ್ನು ದಾಟಿ ಮುಂದೆ ಹೊರಟ ನ್ಯೂ ಹೊರೈಜನ್ ತಾನು ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಭೂಮಿಗೆ ರವಾನಿಸಲು ಸುಮಾರು 15 ತಿಂಗಳ ಕಾಲ ಹಿಡಿಯಿತು. ಸುಮಾರು 4.5 ಬೆಳಕಿನ ಗಂಟೆಗಳಷ್ಟು ದೂರವಿದ್ದ ನ್ಯೂ ಹೊರೈಜನ್ ಮಾಹಿತಿಯನ್ನು ಒಂದು ಅಥವಾ ಎರಡು ಕಿಲೋಬಿಟ್ಸ್ ಪರ್ ಸೆಕೆಂಡ್ ವೇಗದಲ್ಲಿ ರವಾನಿಸಲು ಅಷ್ಟು ಸಮಯ ಬೇಕಾಯಿತು. ಪ್ಲೂಟೊದಿಂದ ಬಂದ ಮಾಹಿತಿ ಪ್ಲೂಟೊ ಮತ್ತು ಅದರ ಉಪಗ್ರಹಗಳು ಈ ಮೊದಲು ಅಂದುಕೊಂಡಕ್ಕಿಂತ ಸಾಕಷ್ಟು ಸಂಕೀರ್ಣವಾಗಿರುವುದಾಗಿ ತಿಳಿದುಬಂತು. ಈ ಮೊದಲು ವಿಜ್ಞಾನಿಗಳು ತಿಳಿದಿದ್ದಂತೆ ಅದರ ವಾತಾವರಣದ ಪಲಾಯನ ಅಂದುಕೊಂಡದ್ದಕ್ಕಿಂತ ಕಡಿಮೆ ದರದಲ್ಲಿ ಇರುವುದರಿಂದ, ಪ್ಲೂಟೊ ಬಗೆಗಿನ ಊಹೆಯನ್ನು ಪುನರ್ವಿಮರ್ಶೆ ಮಾಡುವಂತಾಯಿತು.
ಪ್ಲೂಟೊ
Image credit: NASA/JHUAPL/SwRI

ಪ್ಲೂಟೊ ಮೇಲ್ಮೈನಲ್ಲಿ ಪ್ರಧಾನವಾಗಿ ನಮ್ಮ ಗಮನಸೆಳೆಯುವುದು ಎಂದರೆ ಅದರ ಹೃದಯಾಕಾರದ ಪ್ರದೇಶ ಇದು ಸುಮಾರು 10 ಲಕ್ಷ ಚದರ ಮೈಲಿಗಳಷ್ಟು ವಿಸ್ತಾರ ಇರುವ ಸಾರಜನಕದ ಹಿಮನದಿ.ಇದರ ಎಡ ವೆಂಟ್ರಿಕಲ್ ಎಂದು ಕರೆಯಲಾಗುವ ಸ್ಪುಟ್ನಿಕ್ ಪ್ಲನಿಶಿಯ ಎನ್ನುವ ಪ್ರದೇಶವು ಪ್ಲೂಟೊ ತನ್ನ ಓರೆಯನ್ನು ಬದಲಿಸಿಕೊಳ್ಳುವಂತೆ ಮಾಡಿದೆ. ಈಗ ಈ ಪ್ರದೇಶ ಪ್ಲೂಟೋದ ಉಪಗ್ರಹ ಚೇರಾನ್‌ನ ವಿರುದ್ಧ ದಿಕ್ಕಿನಲ್ಲಿ ಇದೆ. ಮೊದಲಿಗೆ ಈ ಪ್ರದೇಶವು ಪ್ಲುಟೊದ ಉತ್ತರ ಧ್ರುವದ ಬಳಿ ಈಗಿರುವದಕ್ಕಿಂತ ವಾಯುವ್ಯ ದಿಕ್ಕಿನಲ್ಲಿ ಇತ್ತು. ಈ ರೀತಿ ಆಗಿರುವುದು ಕೇವಲ ಆಕಸ್ಮಿಕವಲ್ಲ ಈ ಪ್ರದೇಶದಲ್ಲಿ ಸಾರಜನಕದ ಹಿಮ ಹೆಚ್ಚು ಹೆಚ್ಚು ಕೂಡಿಕೊಂಡು ಸುಮಾರು ನಾಲ್ಕು ಕಿಲೋಮೀಟರ್‌ಅಷ್ಟು ದಪ್ಪವಾಗಿದೆ ಇದರ ರಾಶಿಯಿಂದಾಗಿ ಮತ್ತು ಉಪಗ್ರಹ ಚೇರಾನ್‌ನ ಸೆಳೆತದಿಂದಾಗಿ ಈ ರೀತಿ ಟೈಡಲ್ ಆಕ್ಸಿಸ್‌ಗೆ ಸಮಾನವಾಗಿ ಹೊಂದಿಕೊಂಡಿದೆ . ಇದೇ ರೀತಿ ಸಾರಜನಕದ ಹಿಮ ಹೆಚ್ಚುಹೆಚ್ಚು ಕೂಡಿ ಕೊಂಡಷ್ಟು ಪ್ಲೂಟೊ ತನ್ನ ಓರೆಯನ್ನು ಇನ್ನಷ್ಟು ಬದಲಿಸಿಕೊಳ್ಳಲಿದೆ.

ಪ್ಲೂಟೊ ತನ್ನ ಓರೆಯನ್ನು ಬದಲಿಸಿಕೊಳ್ಳುವ ಕಾರಣ ಕೇವಲ ಸಾರಜನಕದ ಹಿಮರಾಶಿ ಅಷ್ಟೇ ಅಲ್ಲ. ಕೆಲವು ಮಾಹಿತಿಗಳ ಪ್ರಕಾರ ಹೆಚ್ಚು ಭಾರವಾದ ರಾಶಿಯೊಂದು ಅದರ ಅಡಿಯಲ್ಲಿ ಇರಬಹುದು ಮತ್ತೆ ವಿಜ್ಞಾನಿಗಳು ಇದನ್ನು ನೀರಿನ ಸಾಗರ ಎಂದು ಶಂಕಿಸಿದ್ದಾರೆ. ಸುಮಾರು 4 ಶತಕೋಟಿ ವರ್ಷಗಳ ಹಿಂದೆ 50 ರಿಂದ 100 ಕಿಮೀ ಇದ್ದ ಕೈಪರ್ ಪಟ್ಟಿಯ ವಸ್ತುವೊಂದು ಪ್ಲೂಟೊಗೆ ಹೊಡೆದಿರಬಹುದು. ಇದರಿಂದಾಗಿ ಪ್ಲೂಟೊ ತನ್ನ ಮೇಲ್ಮೈನಲ್ಲಿ ಬಹುತೇಕ ವಸ್ತುವನ್ನು ಕಳೆದುಕೊಂಡು ತೆಳುವಾದ ಪದರವನ್ನು ಅದರ ನೆಲದಡಿಯಲ್ಲಿ ಉಂಟುಮಾಡಿರಬಹುದು. ಈ ಜಾಗದಿಂದ ಅಂತರ್ಗತವಾಗಿದ್ದ ಸಾಗರ ಮೇಲೆ ಹುಟ್ಟಿ ಬಂದು ಅನಂತರ ಅದರ ಮೇಲೆ ಸಾರಜನಕದ ಹಿಮರಾಶಿ ಕೂಡಿಕೊಂಡಿರಬಹುದು.    

ಪ್ಲೂಟೊ ಮೇಲ್ಮೈನಲ್ಲಿ ನಾವು ಅನೇಕ ಬಿರುಕುಗಳನ್ನು ಕಾಣಬಹುದು ಇದು ಸುಮಾರು ಎರಡುವರೆ ಮೈಲಿಗಳಷ್ಟು ಆಳಕ್ಕೆ ಹೋಗಿರುವುದು ಕಂಡುಬಂದಿದೆ. ಬಹುಶಃ ಅಂತರಾಳದಲ್ಲಿರುವ ಸಾಗರ ನಿಧಾನವಾಗಿ ಘನೀಕೃತಗೊಳ್ಳುತ್ತಿರುವುದರಿಂದ ಇದು ಉಂಟಾಗಿರಬಹುದು. ಆದರೆ ಪ್ಲೂಟೊನಲ್ಲಿ ಈಗಲೂ ಇಂತಹ ಬಿರುಕುಗಳು ಕಂಡುಬರುತ್ತಿರುವುದರಿಂದ ಅದರ ಅಂತರಾಳದಲ್ಲಿನ ಸಾಗರ ಈಗಲೂ ಘನೀಕೃತವಾಗುತ್ತಿದೆ ಎಂದು ಭಾವಿಸಲಾಗಿದೆ. ಪ್ಲೂಟೊದಲ್ಲಿ ಸಾಗರಗಳು ಇದ್ದರು ಅವು ಅಲ್ಲಲ್ಲಿ ಪ್ರತ್ಯೇಕಗೊಂಡು ಸುಮಾರು 200 ಮೈಲಿಗಳಷ್ಟು ಆಳದಲ್ಲಿ ಹುದುಗಿದೆ ಹಾಗಾಗಿ ಅವು ಇಂದು ಎಂದಿಗೂ ಮೇಲ್ಮೈ ಸಂಪರ್ಕಕ್ಕೆ ಬರಲಾರವು. ಆದರೆ ಅವು ಹಿಂದೊಮ್ಮೆ ಜ್ವಾಲಮುಖಿಯಂತೆ ಹೊರಸೂಸಿರಬಹುದು.

ಪ್ಲೂಟೊ ಮೇಲಿನ ಜ್ವಾಲಾಮುಖಿ ನಮ್ಮ ಭೂಮಿಯ ಮೇಲಿನ ಜ್ವಾಲಾಮುಖಿಯಂತೆ ಅಲ್ಲದೆ ವಿಭಿನ್ನವಾಗಿದೆ. ನಮ್ಮ ಭೂಮಿಯ ಮೇಲಾದರೆ ಜ್ವಾಲಾಮುಖಿಯು ತನ್ನ ಭೂಮಿಯ ಆಳದಲ್ಲಿರುವ ಬಿಸಿಯಾದ ಲಾವಾರಸವನ್ನು ಹೊರಗೆ ಹಾಕುತ್ತದೆ. ಆದರೆ ಪ್ಲೂಟೊನಲ್ಲಿ ತಣ್ಣಗಿನ ವಸ್ತು ಹೊರಬಂದಿರುವುದು ತಿಳಿಯುತ್ತದೆ. ಇದನ್ನು ಕ್ರಯೊವಾಲ್ಕ್ಯಾನಿಸಮ್ ಎಂದು ಕರೆಯುತ್ತಾರೆ. ಸ್ಪುಟ್ನಿಕ್ ಪ್ಲನಿಶಿಯದ ದಕ್ಷಿಣದಲ್ಲಿರುವ ರೈಟ್ ಮಾನ್ಸ್ ಮತ್ತು ಪಿಕ್ಯಾರ್ಡ್ ಮಾನ್ಸ್ ಎರಡು ಪರ್ವತಗಳ ತುದಿಯಲ್ಲಿ ಜ್ವಾಲಾಮುಖಿಯಂತೆ ಹಳ್ಳಗಳು ಕಾಣಿಸಿಕೊಂಡಿದೆ. ಪಶ್ಚಿಮದಲ್ಲಿ ಕಾಣಿಸುವ ವೈಕಿಂಗ್ ಟೆರ್ರದಲ್ಲಿ ಉದ್ದದ ಬಿರುಕು ಮತ್ತು ಕಂದರಗಳು ಇವೆ, ಹಿಂದೊಮ್ಮೆ ಇಲ್ಲಿ ಕ್ರಯೊಲಾವ ಹರಿದು ಇದು ಉಂಟಾಗಿರಬಹುದು ಎಂದು ವಿಜ್ಞಾನಿಗಳು ಸಂಶಯಿಸಿದ್ದಾರೆ. ಸ್ಪುಟ್ನಿಕ್ ಪ್ಲನಿಶಿಯದ ಪಶ್ಚಿಮದಲ್ಲಿ ವರ್ಜಿಲ್ ಫೋಸೆ ಎಂಬ ಪ್ರದೇಶ ಅಮೋನಿಯಾ ಕ್ರಯೊಲಾವ ಸಿಡಿದು ನೆಲದ ಮೇಲೆ ಬಳಿದುಕೊಂಡಿರುವುದು ಸುಮಾರು ಸಾವಿರಾರು ಚದರ ಕಿಲೋಮೀಟರ್ ನಷ್ಟು ಕಾಣಿಸುತ್ತದೆ ಹೀಗಾಗಿ ಇದರ ಬಣ್ಣ ಕೆಂಪಾಗಿದೆ ಇದು ಸುಮಾರು ಒಂದು ಶತಕೋಟಿ ವರ್ಷ ಅಥವಾ ಅದಕ್ಕಿಂತ ಇತ್ತೀಚಿನ ಸಮಯದಲ್ಲಿ ಉಂಟಾಗಿರಬಹುದು.
ಸ್ಪುಟ್ನಿಕ್ ಪ್ಲನಿಶಿಯದ ದಕ್ಷಿಣದಲ್ಲಿರುವ ರೈಟ್ ಮಾನ್ಸ್
Image credit: NASA/JHUAPL/SwRI 


ಪ್ಲೂಟೊನಲ್ಲಿ ಸಕ್ರಿಯವಾದ ಹಿಮನದಿಗಳು ಇವೆ. ಸ್ಪುಟ್ನಿಕ್ ಪ್ಲನಿಶಿಯದ ಪೂರ್ವದಲ್ಲಿ ಸಾರಜನಕದ ಹಿಮನದಿ ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿದಿರುವುದು ಕಂಡುಬರುತ್ತದೆ. ಈ ಹರಿವಿನಿಂದಾಗಿ ಅಲ್ಲಿ ಕಣಿವೆಗಳು ಉಂಟಾಗಿವೆ. ಪ್ಲೂಟೊ ವಾತಾವರಣದಲ್ಲಿ ಉಂಟಾಗುವ ವೈಪರೀತ್ಯದಿಂದ ಸಾರಜನಕ ಹಿಮ ಕರಗಿ ಆವಿಯಾಗಿ ಮತ್ತೊಮ್ಮೆ ಘನೀಕೃತಗೊಂಡು ಮಗದೊಮ್ಮೆ ಹಿಮವಾಗಿ ಮಾರ್ಪಡುತ್ತದೆ. ಈ ಕಾರಣದಿಂದಾಗಿ ಪ್ಲೂಟೊ ಮೇಲೆ ಹಿಮನದಿಗಳು ಇವೆ. ಪ್ಲೂಟೊ ಮೇಲೆ ನೀರಿನ ಹಿಮ ಸಹ ಇರುವುದರಿಂದ ಮತ್ತು ನೀರು ಸಾರಜನಕಕ್ಕಿಂತ ಕಡಿಮೆ ಸಾಂದ್ರತೆ ಇರುವುದರಿಂದ ನೀರಿನ ಹಿಮ ಸಾರಜನಕದ ಹಿಮದ ಮೇಲೆ ತೇಲುತ್ತದೆ. ಸ್ಪುಟ್ನಿಕ್ ಪ್ಲನಿಶಿಯದ ಅನೇಕ ಚಿತ್ರಗಳಲ್ಲಿ ಇಂತಹ ಹಿಮಗುಡ್ಡೆಗಳು ಕಾಣಿಸಿಕೊಂಡಿವೆ.

ಪ್ಲೂಟೊ ಮೇಲೆ ಉಷ್ಣ ಸಂವಹನದ ಕೋಶಗಳು ಕಾಣಿಸುತ್ತದೆ. ಇದು ಸೌರಮಂಡಲದಲ್ಲಿ ಇನ್ನೆಲ್ಲೂ ಕಾಣದ ಲಕ್ಷಣವಾಗಿದೆ. ಸ್ಪುಟ್ನಿಕ್ ಪ್ಲನಿಶಿಯ ಪ್ರದೇಶದಲ್ಲಿ ಸರಣಿಯಾಗಿ ಬಹುಭುಜಾಕೃತಿಯ ಹಿಮದ ಕೋಶಗಳು ಕಾಣಿಸುತ್ತದೆ. ಸುಮಾರು ಹತ್ತು ಕಿಲೋಮೀಟರ್ ಅಗಲದ ಕೋಶಗಳು, ನೋಡಲು ಮೈಕ್ರೋಸ್ಕೋಪಿನಲ್ಲಿ ಕಾಣುವ ಕೋಶಗಳಂತೆಯೇ ಕಾಣುತ್ತದೆ ಆದರೆ ಇವು ಹಿಮನದಿಯ ಕೆಳಗಿನಿಂದ ಉಷ್ಣ ಹೊರಗೆ ಪಲಾಯನ ಮಾಡುವ ಸಂದರ್ಭದಲ್ಲಿ ಉಂಟಾದ ಆಕೃತಿಗಳು. ಮಧ್ಯಭಾಗದಲ್ಲಿ ಉಷ್ಣಗೊಂಡ ಹಿಮ ಮೇಲೆ ಬರಲು ಪ್ರಯತ್ನಿಸಿದರೆ ಅಂಚಿನಲ್ಲಿ ಶೀತಲವಾದ ಹಿಮ ಒಳಗೆ ಮುಳುಗಲು ಪ್ರಯತ್ನಿಸುತ್ತದೆ. ಹೀಗಾಗಿ ಇಂತಹ ಆಕಾರಗಳು ಉಂಟಾಗಿವೆ.

ಪ್ಲೂಟೊ ಮೇಲಿನ ಟಾಮ್‌ಬಾಗ್ ರೀಜಿಯೊ ಎನ್ನುವ ಹೃದಯಾಕಾರದ ಪ್ರದೇಶವು ಸಾರಜನಕದ ಹಿಮದಿಂದ ಕೂಡಿದೆ. ಹಗಲಿನಲ್ಲಿ ಸಾರಜನಕ ಕರಗಿ ಆವಿಯಾಗುತ್ತದೆ ಮತ್ತು ರಾತ್ರಿಯಲ್ಲಿ ಮತ್ತೊಮ್ಮೆ ಘನೀಕೃತಗೊಂಡು ನೆಲಕ್ಕಿಳಿಯುತ್ತದೆ. ಇದರಿಂದಾಗಿ ಈ ಪ್ರದೇಶ ಹೃದಯದಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಉಂಟಾಗುವ ಗಾಳಿಯು ಗ್ರಹದ ಸುತ್ತ ಸುಮಾರು ಗಂಟೆಗೆ 20 ಮೈಲಿ ವೇಗದಲ್ಲಿ ಬೀಸುತ್ತದೆ.

ನಮ್ಮ ಭೂಮಿಯ ಮೇಲೆ ಮರಳುಗಾಡಿನಲ್ಲಿ ಕಾಣುವ ಮರಳಿನ ದಿಣ್ಣೆಗಳಂತೆ ಪ್ಲೂಟೊನಲ್ಲಿ ಸಹ ದಿಣ್ಣೆಗಳು ಇವೆ. ಇದು ಸ್ಪುಟ್ನಿಕ್ ಪ್ಲನಿಶಿಯದ ಪಶ್ಚಿಮದ ಅಂಚಿನಲ್ಲಿ ಕಾಣುತ್ತದೆ. ನೀರಿನ ಹಿಮದ ಪರ್ವತಗಳು ಮರಳಿನಂತಹ ಹಿಮದ ಕಣಗಳನ್ನು ಒದಗಿಸುತ್ತದೆ ಮತ್ತು ಪ್ಲೂಟೊದ ಸಾರಜನಕದ ಹೃದಯಾಕಾರದ ಪ್ರದೇಶ ಗಾಳಿಯನ್ನು ಬೀಸುವಂತೆ ಮಾಡುತ್ತದೆ. ಇದರಿಂದಾಗಿ ಭೂಮಿಯ ಮೇಲಿನ ಮರಳುಗಾಡಿನಲ್ಲಿರುವ ದಿಣ್ಣೆಗಳಂತೆ ಅಲ್ಲು ಸಹ ದಿಣ್ಣೆಗಳು ಕಂಡುಬಂದಿವೆ.

ಪ್ಲೂಟೊನಲ್ಲಿ ಸಹ ದಿಣ್ಣೆಗಳು ಇವೆ
Image credit: NASA/JHUAPL/SwRI

ಪ್ಲೂಟೊ ಮತ್ತು ಚೇರಾನ್‌ನಲ್ಲಿ ಚಿಕ್ಕ ಚಿಕ್ಕ ಗಾತ್ರದ ಕುಳಿಗಳು ಕಂಡುಬರುವುದಿಲ್ಲ. ಇದಕ್ಕೆ ಕಾರಣ ಕೈಪರ್ ಪಟ್ಟಿಯಲ್ಲಿ ಬಹುಶಃ ಯಾವುದೇ ಚಿಕ್ಕಗಾತ್ರದ ವಸ್ತುಗಳು ಇಲ್ಲದೆ ಇರುವುದು ಎಂದು ವಿಜ್ಞಾನಿಗಳು ಸಂದೇಹ ಪಟ್ಟಿದ್ದಾರೆ. ಅನೇಕ ಚಿತ್ರಗಳು ತೋರಿಸಿರುವಂತೆ ಒಂದು ಮೈಲಿಗಿಂತ ಕಡಿಮೆ ಗಾತ್ರದ ಯಾವುದೇ ವಸ್ತುಗಳು ಆ ಗ್ರಹಗಳಿಗೆ ಬಡಿದಿಲ್ಲ. ಇದು ಸೌರಮಂಡಲದ ಉಗಮ ಮತ್ತು ಹೇಗೆ ಇಂದಿನ ಸ್ಥಿತಿಗೆ ಬಂದಿರಬಹುದು ಎಂದು ಅರಿಯಲು ಅನುಕೂಲಮಾಡಿಕೊಡುತ್ತದೆ.

ಚೇರಾನ್‌ನಲ್ಲಿ ಎರಡು ವಿಭಿನ್ನ ರೀತಿಯ ಮೇಲ್ಮೈ ಕಾಣಿಸುತ್ತದೆ. ದಕ್ಷಿಣದೆಡೆಗೆ ವ್ಯಾಪಿಸಿರುವ ಬಯಲು ಇದನ್ನು ವಲ್ಕನ್ ಪ್ಲನಿಶಿಯ ಎಂದು ಕರೆಯುತ್ತಾರೆ ಮತ್ತು ಉತ್ತರದೆಡೆಗೆ ವ್ಯಾಪಿಸಿರುವ ಬೆಟ್ಟ ಗುಡ್ಡಗಳಿಂದ ಕೂಡಿರುವ ಒರಟಾದ ನೆಲ ಇದನ್ನು ಆಝಿ ಟೆರ್ರ ಎಂದು ಕರೆಯುತ್ತಾರೆ. ಚೇರಾನ್ ಒಡಲಾಳದಲ್ಲಿದ್ದ ಸಮುದ್ರ ಘನೀಕೃತಗೊಂಡು ಮತ್ತು ಹಿಗ್ಗಿರುವುದರಿಂದ ಈ ರೀತಿಯ ರೂಪ ಬಂದಿದೆ. ಉತ್ತರದಲ್ಲಿ ಮಿತವಾದ ಹಿಗ್ಗುವಿಕೆ ಒರಟು ನೆಲವನ್ನು ಉಂಟು ಮಾಡಿದ್ದರೆ ದಕ್ಷಿಣದಲ್ಲಿ ಬಿರುಕುಗಳು ಅಥವಾ ತೆರಪುಗಳಿಂದ ಕ್ರಯೊಲಾವ ಹರಿದು ಬಯಲನ್ನುಂಟು ಮಾಡಿದೆ. ಈ ರೀತಿಯ ಲಕ್ಷಣ ಸೌರಮಂಡಲದ ಇತರ ಹಿಮ ಉಪಗ್ರಹಗಳಾದ, ನೆಪ್ಚೂನ್‌ನ ಟ್ರೈಟಾನ್, ಶನಿಯ ಟೇತಿಸ್, ಎನ್ಸೆಲೆಡಸ್ ಮತ್ತು ಡಯೊನ್, ಯುರೇನಸ್‌ನ ಏರಿಯಲ್ ಮತ್ತು ಮಿರಾಂಡದ ಮೇಲೆ ಸಹ ಕಾಣಿಸುತ್ತದೆ.

ಚೇರಾನ್‌
Image credit: NASA/JHUAPL/SwRI


ಕೇವಲ ಒಂದು ಚುಕ್ಕೆಯಂತೆ ಕಾಣುತ್ತಿದ್ದ ಪ್ಲೂಟೊ, ನ್ಯೂ ಹೊರೈಜನ್ ಅನ್ವೇಷಣೆಯಿಂದ ಅನೇಕ ರಹಸ್ಯಗಳನ್ನು ಬಯಲು ಮಾಡಿ ಇದೊಂದು ಸಕ್ರಿಯ ಲೋಕ ಎಂದು ತೋರಿಸಿಕೊಟ್ಟಿದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.