ಮಳೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ಮನೆಯ ಗೋಡೆಯ ಮೇಲೆ ಅಥವಾ ಕೈತೋಟದಲ್ಲಿ ಅನೇಕ ಪತಂಗಗಳು ಮತ್ತು ಅದರ ಕಂಬಳಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಇವಕ್ಕೆ ಸಾಕಷ್ಟು ಆಹಾರ ಒದಗಿಸುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗೆ ಮಳೆಗಾಲದಲ್ಲಿ ಒಮ್ಮೆ ಗೋಡೆಯ ಮೇಲೆ ಕುಳಿತಿದ್ದ ಒಂದು ಪತಂಗ ಸ್ಯಾಂಡಲ್‌ವುಡ್ ಡೀಫೋಲಿಯೇಟರ್ ಅಂದರೆ ಶ್ರೀಗಂಧ ವಿಪರ್ಣಕ ಎಂದು ತಿಳಿಯಿತು.
ಶ್ರೀಗಂಧ ವಿಪರ್ಣಕ |
ಶ್ರೀಗಂಧ ವಿಪರ್ಣಕ ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಅಮಾಟ ಪಸ್ಸಾಲಿಸ್. ಅಮಾಟ ಎನ್ನುವ ಕುಲ, ಟೈಗರ್ ಮಾತ್ ಅಥವಾ ಅರಿಕ್ಟಿನೆ ಉಪಕುಟುಂಬಕ್ಕೆ ಸೇರಿದೆ. ಅರಿಕ್ಟಿನೆ ಉಪಕುಟುಂಬದ ಪತಂಗಗಳ ವಿಶೇಷತೆಯೆನೆಂದರೆ, ಇವು ಸಾಮಾನ್ಯ ಪತಂಗಗಳಂತೆ ಕಾಣದೆ, ದುಂಬಿ ಅಥವಾ ಕಣಜಗಳನ್ನು ಹೋಲುವುದು. ಇದೆ ರೀತಿ ಶ್ರೀಗಂಧ ವಿಪರ್ಣಕ ಸಹ ತನ್ನ ಅಬ್ಡಮನ್ ಮೇಲೆ ಕೆಂಪು ಬಣ್ಣದ ಪಟ್ಟೆಯನ್ನು ಹೊಂದಿರುತ್ತದೆ. ಅಲ್ಲದೆ ಇದರ ರೆಕ್ಕೆಗಳು ಪಾರದರ್ಶಕವಾದ ಚುಕ್ಕೆಗಳಿಂದ ಕೂಡಿರುತ್ತದೆ. ಈ ರೀತಿಯ ದುಂಬಿ ಅಥವಾ ಕಣಜದ ಅನುಕರಣೆಯನ್ನು ಬೆಟೇಷಿಯನ್ ಮಿಮಿಕ್ರಿ ಎನ್ನುತ್ತಾರೆ. ಈ ರೀತಿ ವರ್ತಿಸುವುದರಿಂದ ಶತ್ರುಗಳಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತ್ತದೆ.
ಈ ಪತಂಗ ವರ್ಷಪೂರ್ತಿ ಸಕ್ರಿಯವಾಗಿ ಸಂತಾನೋತ್ಪತ್ತಿಯನ್ನು ಮಾಡುತ್ತಿರುತ್ತದೆ. ಲ್ಯಾಬ್‌ಗಳಲ್ಲಿ ಕಂಡುಕೊಂಡಂತೆ ಇದರ ಜೀವನ ಚಕ್ರ ಸುಮಾರು 62 ದಿನಗಳಾಗಿರುತ್ತವೆ. ಹೆಣ್ಣು ಸುಮಾರು ನಾಲ್ಕು ದಿನಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರಬಂದ ಕಂಬಳಿಹುಳುಗಳು 8 ಹಂತಗಳನ್ನು ದಾಟಿ ವಯಸ್ಕ ಕೀಟಗಳಾಗುತ್ತವೆ. ಇವು ಸೂರ್ಯೋದಯದ ಅನಂತರ ಒಂದೆರಡು ಗಂಟೆಗಳಲ್ಲಿ ತಮ್ಮ ಪ್ಯೂಪಾವಸ್ಥೆಯಿಂದ ಹೊರಬರುತ್ತವೆ.
ಶ್ರೀಗಂಧ ವಿಪರ್ಣಕ ಎಂದು ಇದಕ್ಕೆ ಹೆಸರು ಬರಲು ಕಾರಣ ಇವು ಶ್ರೀಗಂಧದ ಗಿಡಗಳನ್ನು ಅತಿಥೇಯವಾಗಿ ಬಳಸುವುದರಿಂದ. ಇವು ಒಮ್ಮೆ ಶ್ರೀಗಂಧದ ಗಿಡಕ್ಕೆ ದಾಳಿ ಇಟ್ಟರೆ ಅವುಗಳ ಎಲೆಗಳನ್ನು ಸಂಪೂರ್ಣವಾಗಿ ಭಕ್ಷಿಸಿ ಬಿಡುತ್ತವೆ. ಶ್ರೀಗಂಧದ ಗಿಡಗಳನ್ನು ಅಲ್ಲದೆ ಇನ್ನೂ ಅನೇಕ ಗಿಡಗಳನ್ನು ಇವು ಅತಿಥೇಯವಾಗಿ ಬಳಸುತ್ತವೆ. ಅವುಗಳೆಂದರೆ ಪಡವಲಕಾಯಿ, ಹುರಳಿಕಾಯಿ ಮೆಣಸಿನಕಾಯಿ ಹೂಕೋಸು ಇನ್ನೂ ಮುಂತಾದವು. ಕೆಲವು ಕಣಜಗಳು ಇವುಗಳ ಕಂಬಳಿಹುಳುಗಳಲ್ಲಿ ಮೊಟ್ಟೆಯಿಟ್ಟು ಇವನ್ನು ಅತಿಥೇಯವಾಗಿ ಬಳಸುವುದರಿಂದ ಇಂಥ ಕಣಜಗಳನ್ನು ಜೈವಿಕ ನಿಯಂತ್ರಣವಾಗಿ ಬಳಸಬಹುದು.
ಅದು ಗೋಡೆಯ ಮೇಲೆ ಮೊಟ್ಟೆ ಇಡುತ್ತಿರುವುದು ಕಂಡಿತು |
ಒಮ್ಮೆ ನಮ್ಮ ಮನೆಯ ಗೋಡೆಯ ಮೇಲೆ ಒಂದು ಶ್ರೀಗಂಧ ವಿಪರ್ಣಕ ಕುಳಿತಿರುವುದು ಕಂಡು ಬಂತು. ಹತ್ತಿರದಿಂದ ನೋಡಿದಾಗ ಅದು ಗೋಡೆಯ ಮೇಲೆ ಮೊಟ್ಟೆ ಇಡುತ್ತಿರುವುದು ಕಂಡಿತು. ಸುಮಾರು ೫-೬ ದಿನದ ಬಳಿಕ ಮೊಟ್ಟೆಯಿಂದ ಮರಿ ಹೊರಬಂದಿರುವುದು ಕಾಣಿಸಿತು. ಆದರೆ ಅನಂತರ ಆ ಮರಿಗಳು ಆಹಾರಕ್ಕಾಗಿ ಯಾವ ಗಿಡವನ್ನು ಅರಿಸಿ ಹೋಯಿತು ಎಂದು ತಿಳಿಯಲಿಲ್ಲ.
ಮೊಟ್ಟೆಯಿಂದ ಮರಿ ಹೊರಬಂದಿರುವುದು ಕಾಣಿಸಿತು |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ