ವಿಷಯಕ್ಕೆ ಹೋಗಿ

ಇಲ್ಲಿಗೇಕೆ ಬಂತು? ದಾರಿತಪ್ಪಿ ಬಂತು!

ಒಂದು ದಿನ ರಾತ್ರಿ ಎಂಟುಗಂಟೆ ಸಮಯದಲ್ಲಿ ಹೊರಗೆ ಹಾಕಿದ್ದ LED ಬಲ್ಬ್‌ನ ಸಮೀಪ ಎನೋ ಪಟಪಟನೆ ಸದ್ದಾಯಿತು. ಸಾಮಾನ್ಯವಾಗಿ ಆ ಹೊತ್ತಿಗೆ ಯಾವುದೋ ಪತಂಗ ಬಂದಿರಬಹುದೆಂದು ತಿಳಿದೆ. ಮಳೆಗಾಲದ ದಿನಗಳಲ್ಲಂತೂ ಎರಡು-ಮೂರು ದಿನಗಳಿಗೊಮ್ಮೆ ನಾನು ಅದುವರೆವಿಗೂ ನೋಡದ ಪತಂಗಗಳು ಇದೇ ದೀಪದ ಅಡಿಯಲ್ಲಿ ಪ್ರತ್ಯಕ್ಷವಾಗುತ್ತಿತ್ತು. ಹೊರಗೆ ಬಂದು ನೋಡಿದಾಗ ದೀಪದ ಹತ್ತಿರ ರೆಕ್ಕೆ ಬಡಿಯುತ್ತಿದ್ದ ಕೀಟವೋ ಮತ್ತೇನೋ ಒಂದರ ವೇಗಕ್ಕೆ ಅದರ ರೆಕ್ಕೆಗಳೇ ಮುರಿಯಬಹುದು ಎಂದೆನ್ನಿಸಿ ದೀಪದ ಸ್ವಿಚ್ ಆರಿಸಿದೆ, ನಿಶ್ಯಬ್ದವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ದೀಪ ಹಾಕಿದಾಗ ಪಕ್ಕದಲ್ಲಿ ಕುಳಿತಿದ್ದುದು ಪತಂಗವೆಂದೇ ತಿಳಿದೆ. ಹತ್ತಿರದಿಂದ ಗಮನಿಸಿದಾಗ ಅದೊಂದು ಚಿಟ್ಟೆಯಿರಬಹುದು ಎಂದೆನ್ನಿಸಿತು.

ಪತಂಗಗಳು ಮತ್ತು ಚಿಟ್ಟೆಗಳು ಒಂದೇ ಗುಂಪಿಗೆ ಸೇರಿದ ಜೀವಿಗಳಾದರೂ ಅವುಗಳ‌ ಮಧ್ಯೆ ಕೆಲವೊಂದು ವ್ಯತ್ಯಾಸಗಳಿವೆ.

  • ಪತಂಗಗಳು ನಿಶಾಚರಿಗಳಾದರೆ, ಚಿಟ್ಟೆಗಳು ಹಗಲಿನ ಅವಧಿಯಲ್ಲಿ ಚಟುವಟಿಕೆಯಿಂದಿರುತ್ತವೆ.

  • ಪತಂಗಗಳು ಕೂರುವಾಗ ಅವುಗಳ ರೆಕ್ಕೆಗಳನ್ನು ಹರಡಿಕೊಂಡು ಕೂರುತ್ತವೆ. ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು ಮುಚ್ಚಿಕೊಂಡು ಕೂರುತ್ತವೆ.

  • ಪತಂಗಗಳದ್ದು ಕೂದಲಿನಿಂದ ದಟ್ಟವಾಗಿರುವಂತೆ ಕಾಣುವ ಚಿಕ್ಕ ಆಂಟೆನಾಗಳಾದರೆ, ಚಿಟ್ಟೆಗಳದ್ದು ಸಪೂರವಾದ ಉದ್ದ ಆಂಟೆನಾಗಳು.

  • ಹೆಚ್ಚಿನ ಪತಂಗಗಳ ಬಣ್ಣ ಪೇಲವವಾಗಿದ್ದರೆ, ಚಿಟ್ಟೆಗಳದ್ದು ಪ್ರಜ್ವಲಿಸುವ ಗಾಢ ಬಣ್ಣ.

  • ಹೆಚ್ಚಿನ ಪತಂಗಗಳು ಚಿಕ್ಕ ಗಾತ್ರದವುಗಳು. ಇದಕ್ಕೆ ಹೋಲಿಸಿದರೆ ಹೆಚ್ಚಿನ ಚಿಟ್ಟೆಗಳು ದೊಡ್ಡ ಗಾತ್ರದವು.

ದೀಪದ ಅಡಿಯಲ್ಲಿ‌ ಕುಳಿತಿದ್ದ ಅದು ಚಿಟ್ಟೆ ಎಂದು ತಿಳಿಯಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಅದರ ಆಂಟೆನಾ ಮತ್ತು ಗಾಢವರ್ಣದ ಬಣ್ಣದಿಂದ ಸುಲಭವಾಗಿ ಚಿಟ್ಟೆಯೆಂದು ಕಂಡುಕೊಂಡೆ. ಆದರೆ ಯಾವುದೀ ಚಿಟ್ಟೆ? ಅದೂ ರಾತ್ರಿಯ ವೇಳೆ?

ಅದರ ರೆಕ್ಕೆ ಬಡಿತ ಹೆಚ್ಚಾಗುವುದು, ನಾನು ದೀಪ ಆರಿಸುವುದು ನಡೆದೇ ಇತ್ತು. ಸ್ವಲ್ಪ ಹೊತ್ತಿನ ನಂತರ ಚಿಟ್ಟೆ ದೀಪದ ಪಕ್ಕದಲ್ಲೇ ಶಾಂತವಾಗಿ ಕುಳಿತು, ರೆಕ್ಕೆಯನ್ನು ನಿಧಾನವಾಗಿ ಅಗಲಿಸುವುದು, ಮಡಚುವುದು ಮಾಡುತ್ತಿತ್ತು. ಆ ಸಮಯದಲ್ಲಿ ಕೆಲವು ಫೋಟೋಗಳನ್ನು ತೆಗೆದೆ. ನನಗೆ ಖಚಿತವಾಗಿ ಯೊವುದೋ ಚಿಟ್ಟೆ ಪ್ರಭೇದವೊಂದನ್ನು ಪ್ರಥಮ ಬಾರಿಗೆ ನೋಡುತ್ತಿದ್ದೇನೆ ಎಂದು ಖಾತ್ರಿಯಾಯಿತು. ಮತ್ತೆ ದೀಪ ಹಾಕಿ ಅದರ ಶಾಂತಿಗೆ ಭಂಗತರುವುದು ಬೇಡವೆಂದು ದೀಪ ಆರಿಸಿ ಒಳಗೆ ಬಂದೆ.

ಮೊದಲಿನಿಂದಲೂ ಚಿಟ್ಟೆಗಳನ್ನು ಗಮನಿಸಿ ಅಭ್ಯಾಸವಿದ್ದುದರಿಂದ ಇದನ್ನೂ ಗುರುತಿಸಬಹುದೆಂದು ತಿಳಿದೆ. ನನ್ನ ಹತ್ತಿರ 'ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ'ಯವರು ಪ್ರಕಟಿಸಿದ್ದ 'ದಿ ಬುಕ್ ಆಫ್ ಇಂಡಿಯನ್ ಬಟರ್‌ಫ್ಲೈಸ್' ಪುಸ್ತಕವಿತ್ತು. ಅದರಲ್ಲಿ ನೋಡುತ್ತಾ ಹೋದೆ. ಇಡೀ ಪುಸ್ತಕದಲ್ಲಿ ಈ ಚಿಟ್ಟೆಯ ಸುಳಿವೇ ಇಲ್ಲ. ಯಾವುದೋ ಹೊಸ ಪ್ರಭೇದದ ಚಿಟ್ಟೆ ನೋಡುತ್ತಿದ್ದೇನೆಯೇ? ಇರಲಾರದು ಎಂದೆನ್ನಿಸಿತು.

ಬ್ಲೂ ನವಾಬ್ - ರೆಕ್ಕೆ ಹರಡಿಕೊಂಡಿದ್ದಾಗ 

ಇಂತಹ ಸಂದರ್ಭಗಳಲ್ಲಿ ನನ್ನ ಮೊಬೈಲ್‌ನಲ್ಲಿರುವ 'iNaturalist' ಅಪ್ಲಿಕೇಶನ್ ಸಹಾಯಕ್ಕೆ ಬರುತ್ತದೆ. 'iNaturalist' ಒಂದು ಸಮುದಾಯ ವಿಜ್ಞಾನ ಯೋಜನೆಯಡಿ, 'ನ್ಯಾಷನಲ್ ಜಿಯೋಗ್ರಫಿಕ್' ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್. ಇದು ನಾವು ಕಂಡ ಪ್ರಾಣಿ, ಪಕ್ಷಿ, ಕೀಟ, ಸರಿಸೃಪ, ಉಭಯವಾಸಿ, ಸಸ್ಯ ಅಥವಾ ಇನ್ಯಾವುದೇ ಜೀವಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ನೀವು ಮಾಡಬೇಕಾದದ್ದು ಇಷ್ಟೇ. ನೀವು ಕಂಡ ಜೀವಿಯ ಫೋಟೋವೊಂದನ್ನು ತೆಗೆದು ಇದರಲ್ಲಿ ಅಪ್ಲೋಡ್ ಮಾಡಬೇಕು. ಇದನ್ನು ಅನುಭವವಿರುವವರು ನೋಡಿ ಆ ಜೀವಿ ಯಾವುದೆಂದು ಗುರುತಿಸುತ್ತಾರೆ. ಆಂಡ್ರಾಯ್ಡ್ ಮತ್ತು ಐಫೋನ್‌ ಎರಡರಲ್ಲೂ ಕೆಲಸ ಮಾಡುವ ಈ ಅಪ್ಲಿಕೇಶನ್‌ನನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದು.

ಆದರೆ ನಾನು 'iNaturalist'ಗೆ ಫೋಟೋವನ್ನು ಅಪ್ಲೋಡ್ ಮಾಡಿ ಎರಡು ದಿನಗಳವರೆಗೂ ಅದನ್ನು ಯಾರೂ ಗುರುತಿಸಲೇ ಇಲ್ಲ. ಈ ಪ್ರಭೇದದ ಚಿಟ್ಟೆ ಅಷ್ಟೊಂದು ಅಪರೂಪವೆ?

ಎರಡು ದಿನಗಳ‌ ನಂತರ ಅದೊಂದು 'ಬ್ಲೂ ನವಾಬ್' (Blue Nawab - Polyura schreiber) ಎಂದು ಒಬ್ಬರು ಗುರುತಿಸಿದರು. ನನ್ನ ಬಳಿಯಿದ್ದ ಪುಸ್ತಕದಲ್ಲಿ ಅದರ ಚಿತ್ರವೇ ಇರಲಿಲ್ಲ! ಅದೊಂದು ಅಪರೂಪದ ಚಿಟ್ಟೆಯೇ ಆಗಿತ್ತು. ಪಶ್ಚಿಮ ಘಟ್ಟಗಳಲ್ಲಿ ಮತ್ತು ಈಶಾನ್ಯ ಭಾರತದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಮಾತ್ರ ನೋಡಸಿಗುವ ಈ ಚಿಟ್ಟೆ, ನೆಲ ಮಟ್ಟಕ್ಕೆ ಬರುವುದೇ ಕಡಿಮೆ. ಕಾಡಿನ ಹೊಳೆ, ತೊರೆಗಳ ಬದಿಯ ಎತ್ತರದ ಮರಗಳ ಮೇಲಿನ ಹೂವುಗಳನ್ನೇ ಆಶ್ರಯಿಸುತ್ತವೆ.

 
ಬ್ಲೂ ನವಾಬ್ - ರೆಕ್ಕೆ ಮಡಚಿಕೊಂಡಿದ್ದಾಗ

ಹೆಚ್ಚಾಗಿ ಮರಗಳ ಮೇಲೆಯೇ ಜೀವನ ಕಳೆಯುವ ಈ ಚಿಟ್ಟೆ ನಮ್ಮ ಮನೆಗೆ ಏಕೆ ಬಂತೋ? ದೀಪದ ಬೆಳಕಿಗೆ ದಾರಿ ತಪ್ಪಿಯೇ ಬಂದಿರಬಹುದು. ಮಾರನೆಯ ದಿನ ಇನ್ನೂ ನಸುಗತ್ತಲಿರುವಾಗಲೇ ಎದ್ದು ಹೊರಗೆ ಬಂದು ನೋಡಿದೆ. ಚಿಟ್ಟೆ ಇನ್ನೂ ಅಲ್ಲಿಯೇ ಇತ್ತು. ಸ್ವಲ್ಪ‌ ಬೆಳಕಾಗುತ್ತಿದ್ದಂತೆ ಕಾಡಿನ ಕಡೆಗೆ ಹಾರಿ ಹೋಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.