ವಿಷಯಕ್ಕೆ ಹೋಗಿ

ನೀಲಿ ಪಟ್ಟೆಯ ದುಂಬಿ

ನಮ್ಮ ಮನೆಯಲ್ಲಿದ್ದ ಕೈತೋಟದಲ್ಲಿ ನಾನು ಹಲವು ತರಕಾರಿ ಗಿಡಗಳನ್ನು ಬೆಳೆಸಲು ಪ್ರಯತ್ನಪಟ್ಟಿದ್ದೆ. ಆದರೆ ಅನೇಕ ಗಿಡಗಳು ಮೊಳಕೆಯೊಡೆದು ದೊಡ್ಡದಾಗಿ ಹೂಗಳನ್ನು ತೆಳದು ಅನಂತರ ಕಾಯಿಯಾಗಲು ವಿಫಲವಾಗುತ್ತಿದ್ದವು. ನನ್ನ ಪ್ರಕಾರ ಇದಕ್ಕೆ ಮುಖ್ಯ ಕಾರಣ ಹೂಗಳ ಪರಾಗಸ್ಪರ್ಶವಾಗದೆ ಇರುವುದು ಅಥವಾ ಪರಾಗಸ್ಪರ್ಶ ಮಾಡುವಂತಹ ಕೀಟಗಳ ಅನುಪಸ್ಥಿತಿಯಿಂದ ಈ ರೀತಿ ಆಗುತ್ತಿದ್ದಿರಬಹುದು. ಆದರೆ ಒಂದು ತರಕಾರಿ ಗಿಡ ಮಾತ್ರ ಇದಕ್ಕೆ ಅಪವಾದ ಎನ್ನಬಹುದು ಅದು ಬದನೆಗಿಡ.

ನಾನು ದಿನಾ ಬೆಳಿಗ್ಗೆ ಎದ್ದು ನನ್ನ ಕೈತೋಟದಲ್ಲಿ ಒಮ್ಮೆ ಸುತ್ತಿ ಬರುವುದು ಒಂದು ಅಭ್ಯಾಸವಾಗಿತ್ತು. ಅಲ್ಲಿ ಕಾಣಿಸುತ್ತಿದ್ದ ಕೀಟಗಳು ಮತ್ತು ಜೇಡಗಳು ನನ್ನನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಹೀಗೆ ನಾನು ಪ್ರತಿದಿನ ಗಮನಿಸುತ್ತಿದ್ದ ಕೀಟಗಳಲ್ಲಿ ಮುಖ್ಯವಾದುದು ಎಂದರೆ ಅದು ನೀಲಿ ಪಟ್ಟೆಯ ದುಂಬಿ. ಈ ಕೀಟ ಒಂದು ದಿನವೂ ತಪ್ಪದೇ ಬದನೆ ಗಿಡಗಳಲ್ಲಿ ಬಿಟ್ಟಿದ್ದ ಹೂಗಳ ಮಕರಂದ ಹೀರುತ್ತಾ ಹಾರಡುತ್ತಿತ್ತು. ಈ ಕೀಟದ ಕಾರಣದಿಂದಾಗಿ ಬದನೆಯ ಪರಾಗಸ್ಪರ್ಶವಾಗಿ ನಮಗೆ ಬದನೆಕಾಯಿ ಸಿಗುತ್ತಿತ್ತು.

ನೀಲಿ ಪಟ್ಟೆಯ ದುಂಬಿಗಳು ಸುಂದರವಾದ ದುಂಬಿಗಳು ಎಂದರೆ ತಪ್ಪಾಗಲಾರದು. ಇವುಗಳ ತೋರಾಕ್ಸ್ ಅಂದರೆ ನಡುಭಾಗ ತುಪ್ಪಳದಂತೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿ ಇರುತ್ತದೆ. ಅಬ್ಡೋಮನ್ ಅಂದರೆ ಹಿಂಭಾಗ ನೀಲಿ ಪಟ್ಟೆಯನ್ನು ಹೊಂದಿರುತ್ತದೆ ಈ ಕಾರಣಕ್ಕಾಗಿ ಇದಕ್ಕೆ ನೀಲಿ ಪಟ್ಟೆಯ ದುಂಬಿ ಎಂದು ಹೆಸರು ಬಂದಿದೆ. ನೀಲಿ ಪಟ್ಟೆಯ ದುಂಬಿಗಳು ಅಮೇಜಿಲ್ಲ ಜೀನಸ್ ಮತ್ತು ಎಪಿಡೆ ಕುಟುಂಬದಲ್ಲಿ ವರ್ಗೀಕರಿಸಲಾಗಿದೆ ಅಮೇಜಿಲ್ಲ ಜೀನಸ್ ನಲ್ಲಿ ಬಹುತೇಕ ದುಂಬಿಗಳು ನೀಲಿ ಪಟ್ಟೆಯನ್ನು ಹೊಂದಿರುತ್ತದೆ. ಇವು ಪ್ರಪಂಚದಾದ್ಯಂತ ಕಂಡುಬರುತ್ತವೆ ಆದರೆ ಉತ್ತರದ 450ಗಿಂತ ಮೇಲೆ ಅಪರೂಪವಾಗುತ್ತವೆ.

ನೀಲಿ ಪಟ್ಟೆಯ ದುಂಬಿ ಏಕಾಂಗಿ ದುಂಬಿ. ಪ್ರತಿಯೊಂದು ಹೆಣ್ಣು ದುಂಬಿ ಪ್ರತ್ಯೇಕವಾದ ಗೂಡುಗಳನ್ನು ರಚಿಸಿಕೊಳ್ಳುತ್ತವೆ. ಇವು ತಮ್ಮ ಗೂಡನ್ನು ಮಣ್ಣಿನಲ್ಲಿ ರಂಧ್ರ ಕೊರೆದು ರಚಿಸಿಕೊಳ್ಳುತ್ತವೆ ಹಾಗಾಗಿ ಇದನ್ನು ಅಗೆಯುವ (Diggers) ದುಂಬಿಗಳು ಅಥವಾ ಗಣಿಗಾರಿಕೆ (Miners) ದುಂಬಿಗಳು ಎಂದು ಕರೆಯುತ್ತಾರೆ. ನಗರಗಳಲ್ಲಿ ಈ ದುಂಬಿಗಳು ಮಣ್ಣಿನ ಇಟ್ಟಿಗೆಗಳಲ್ಲಿ ತಮ್ಮ ಗೂಡನ್ನು ರಚಿಸಿಕೊಳ್ಳುತ್ತವೆ. ತಮ್ಮ ಗೂಡನ್ನು ರಂಧ್ರ ಕೊರೆದು ರಚಿಸಿ ಸುರಂಗದೊಳಗೆ ತುದಿಯಲ್ಲಿ ಅನೇಕ ಕೋಶಗಳನ್ನು ರಚಿಸಿ, ಕೋಶದಲ್ಲಿ ಜೇನು ಮತ್ತು ಪರಾಗವನ್ನು ಸಂಗ್ರಹಿಸಿ, ಅಲ್ಲಿ ಮೊಟ್ಟೆ ಇಡುತ್ತದೆ ಮೊಟ್ಟೆಯಿಂದ ಹೊರಬಂದ ಮರಿಗಳು ಜೇನು ಮತ್ತು ಪರಾಗವನ್ನು ತಿಂದು ದೊಡ್ಡದಾಗಿ ಬೆಳೆಯುತ್ತದೆ. ವಯಸ್ಕ ಕೀಟವಾಗಿ ಗೂಡನ್ನು ತೊರೆದು ಮುಂದಿನ ಜೀವನವನ್ನು ನಡೆಸುತ್ತವೆ.

ನೀಲಿ ಪಟ್ಟೆಯ ದುಂಬಿಗಳು ವಿಶೇಷವಾದ ಪರಾಗಸ್ಪರ್ಶ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಕೆಲವು ಪುಷ್ಪಗಳು ತಮ್ಮ ಪರಾಗವನ್ನು ಒಂದು ರೀತಿಯ ಕ್ಯಾಪ್ಸುಲ್ನಲ್ಲಿ ಅಡಗಿಸಿ ಕೊಂಡಿರುತ್ತವೆ. ಈ ದುಂಬಿಗಳು ತಮ್ಮ ಹಾರುವ ಮಾಂಸಖಂಡವನ್ನು ಅದರಿಸುವದರಿಂದ ಕ್ಯಾಪ್ಸುಲ್ ಒಡೆದು ಪರಾಗ ಈಚೆಗೆ ಸಿಡಿಯುತ್ತದೆ. ಪರಾಗ ದುಂಬಿಗಳ ಮೈಗೆ ಅಂಟಿಕೊಂಡು, ಅದರ ಸಂಗ್ರಹಣೆಗೆ ಸಹಾಯವಾಗುತ್ತದೆ ಅಲ್ಲದೆ ಅದರಿಂದ ದುಂಬಿಗಳು ಇತರ ಪುಷ್ಪಗಳಿಗೆ ಭೇಟಿ ನೀಡಿದಾಗ ಪರಾಗಸ್ಪರ್ಶ ನಡೆಯುತ್ತದೆ. ಈ ವಿಶೇಷವಾದ ಪರಾಗಸ್ಪರ್ಶಕ್ಕೆ ಝೇಂಕಾರ ಪರಾಗಸ್ಪರ್ಶ (Buzz pollination) ಎಂದು ಹೆಸರು. ನೀಲಿ ಪಟ್ಟೆಯ ದುಂಬಿಗಳು ಟೊಮೆಟೊ, ಬದನೆ, ಕಿವಿ ಮತ್ತು ಕೆಲವು ಜಾತಿಯ ಹುರುಳಿ ಗಿಡಗಳನ್ನು ಯಶಸ್ವಿಯಾಗಿ ಪರಾಗಸ್ಪರ್ಶ ಮಾಡುತ್ತವೆ.

ನೀಲಿ ಪಟ್ಟೆಯ ದುಂಬಿಗಳು ಆಕ್ರಮಣಕಾರಿ ದುಂಬಿಗಳು ಅಲ್ಲ. ನಾವೇನಾದರೂ ಅದನ್ನು ಹಿಡಿಯಲು ಹೋದರೆ ಅದು ಮೆದುವಾದ ಕಡಿತವನ್ನು ನೀಡುತ್ತದೆ. ಇವು ಇತರ ದುಂಬಿಗಳಿಗಿಂತ ವೇಗವಾಗಿ ಹಾರುವುದನ್ನು ನಾವು ನೋಡಬಹುದು. ಗಂಡು ದುಂಬಿಗಳು ರಾತ್ರಿಯ ವೇಳೆ ಗಿಡದ ಟೊಂಗೆ ಮೇಲೆ ಕುಳಿತುಕೊಂಡು ಕಳೆಯುತ್ತವೆ ಹೆಣ್ಣು ಸಾಮಾನ್ಯವಾಗಿ ತನ್ನ ಗೂಡಿನ ಒಳಗೆ ರಾತ್ರಿಯನ್ನು ಕಳೆಯುತ್ತವೆ.
 
ಹೂವಿನೆಡೆಗೆ ಹಾರುತ್ತಿರುವ ನೀಲಿ ಪಟ್ಟೆಯ ದುಂಬಿ

ಬದನೆ ಹೂಗಳು

ಗಂಡು ದುಂಬಿಗಳು ರಾತ್ರಿಯ ವೇಳೆ ಗಿಡದ ಟೊಂಗೆ ಮೇಲೆ ಕುಳಿತುಕೊಂಡು ಕಳೆಯುತ್ತವೆ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.