ವಿಷಯಕ್ಕೆ ಹೋಗಿ

ಸಗಣಿ ಓಡುಹುಳು

ಪ್ರತೃತಿಯಲ್ಲಿ ಸಾವಯವ ವಸ್ತುಗಳು ಪುನಾರವರ್ತನೆಗೆ ಒಳಗಾಗುತ್ತದೆ. ಹೀಗೆ ಆಗದಿದ್ದರೆ ನಮ್ಮ ಪರಿಸರ ನಿಂತನೀರಾಗುತ್ತಿತ್ತು. ನಾವು ತಿಂದು ಉಳಿದ ಆಹಾರವನ್ನೆ ತೆಗೆದುಕೊಳ್ಳಿ ಅದನ್ನು ಕಾಗೆ, ಇರುವೆ ಮುಂತಾದ ಪಕ್ಷಿ ಪ್ರಾಣಿಗಳು ತಿಂದು ಇನ್ನಷ್ಟು ಮುರಿಯುವಂತೆ ಮಾಡುತ್ತವೆ, ನಂತರ ಸೂಕ್ಷ್ಮ ಜೀವಿಗಳು ಇನ್ನಷ್ಟು ಮುರಿದು ಕೊನೆಯದಾಗಿ ಮೂಲಧಾತುವಾಗಿ ಪರಿಸರಕ್ಕೆ ಸೋರಿ ಮತ್ತೆ ಪುನರಾವರ್ತನೆಗೊಳ್ಳುತ್ತವೆ. ಆಹಾರಗಳಲ್ಲೆ ಜೀರ್ಣಿಸಿಕೊಳ್ಳಲು ಕಷ್ಟದ ಆಹಾರವೆಂದರೆ ಸಸ್ಯಗಳು. ನಾವು ಇವುಗಳನ್ನು ಬೇಯಿಸಿ ತಿನ್ನುವುದರಿಂದ ನಮಗೆ ಅದರ ಅರಿವು ಇಲ್ಲದಿರಬಹುದು ಆದರೆ ಸಸ್ಯಹಾರಿ ಪ್ರಾಣಿಗಳು ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುವುದು ಕಷ್ಟ. ಹೀಗೆ ಸಂಪೂರ್ಣವಾಗಿ ಜೀರ್ಣವಾಗದ ಆಹಾರ ಮತ್ತೆ ಪುನರಾವರ್ತನೆ ಆಗಬೇಕಲ್ಲವೆ. ಇದಕ್ಕೆಂದೆ ನಮ್ಮ ಪರಿಸರದಲ್ಲಿ ತಜ್ಞ ಜೀವಿಗಳಿವೆ. ಅಂತಹ ಒಂದು ಜೀವಿಯೆ ಸಗಣಿ ಓಡುಹುಳು.
ಸಗಣಿ ಓಡುಹುಳುಗಳು ತಮಗಿಂತ ಎಷ್ಟೋ ಪಟ್ಟು ದೊಡ್ಡದಾದ ಉಂಡೆಯನ್ನು ರಚಿಸಿಕೊಳ್ಳುತ್ತವೆ

ಸಗಣಿ ಓಡುಹುಳುಗಳಲ್ಲಿ ಅನೇಕ ಬಗೆಯುಂಟು ಅದರಲ್ಲಿ ನಮಗೆ ಸಾಮಾನ್ಯವಾಗಿ ಕಾಣಿಸುವುದೊಂದರೆ ಸಗಣಿಯನ್ನು ಉಂಡೆಮಾಡಿಕೊಂಡು ಉರುಳಿಸಿಕೊಂಡು ಹೋಗುವ ಕೀಟಗಳು. ಇದಲ್ಲದೆ ಸಗಣಿ ಅಥವಾ ಲದ್ದಿಯನ್ನು ಹೂಳುವ ಮತ್ತು ನೇರವಾಗಿ ಮೊಟ್ಟೆಯಿಡುವ ಸಗಣಿ ಓಡುಹುಳುಗಳು ಉಂಟು. ಇವು ಅಂಟಾರ್ಟಿಕ ಖಂಡವನ್ನು ಹೊರತುಪಡಿಸಿ ಇನ್ನೆಲ್ಲೆಡೆ ಕಂಡು ಬರುತ್ತವೆ.

ಸುಮಾರು ಹತ್ತು ವರ್ಷಗಳ ಕೆಳಗೆ ನಾನು ಮತ್ತು ಶ್ರೀಕಾಂತ ನಿಯತವಾಗಿ ತುರಹಳ್ಳಿ ಕಾಡಿಗೆ ಭೇಟಿ ಕೊಡುತ್ತಿದ್ದೆವು. ಅಲ್ಲಿ ಯಾವುದಾದರೂ ಪ್ರಾಣಿ, ಪಕ್ಷಿಗಳನ್ನು ಅಥವಾ ಗಿಡ ಇತರ ಕೀಟಗಳನ್ನು ಗಮನಿಸುತ್ತಿದ್ದಾಗ ನಮಗೆ ಸಾಮಾನ್ಯವಾಗಿ ಕಾಣುತ್ತಿದ್ದ ಒಂದು ಕೀಟ ಎಂದರೆ ಅದು ಸಗಣಿ ಓಡುಹುಳು. ಅದು ಬಹು ಪ್ರಯಾಸಪಟ್ಟು ಸಗಣಿಯನ್ನು ತಳ್ಳುತ್ತಾ ಇದ್ದದ್ದನ್ನು ಕಂಡು ನಮಗೆ ಅಚ್ಚರಿಯಾಗುತ್ತಿತ್ತು ಅದನ್ನು ಗಮನಿಸುತ್ತಾ ಕಾಲ ಕಳೆಯುತ್ತಿದ್ದೆವು. ಸಗಣಿ ಓಡುಹುಳುಗಳು ತಮಗಿಂತ ಎಷ್ಟೋ ಪಟ್ಟು ದೊಡ್ಡದಾದ ಉಂಡೆಯನ್ನು ರಚಿಸಿಕೊಳ್ಳುತ್ತವೆ. ಅದಕ್ಕೆ ಅಡ್ಡ ಬರುತ್ತಿದ್ದ ನೂರಾರು ಅಡೆತಡೆಗಳನ್ನು ದಾಟಿಕೊಂಡು ಸಗಣಿ ಉಂಡೆಯ ಉರುಳಿಸಿಕೊಂಡು ಹೋಗುತ್ತಿದ್ದ ಪ್ರಯತ್ನ ವಿಸ್ಮಯಕಾರಿಯಾಗಿ ಕಂಡುಬರುತ್ತಿತ್ತು. ಗುಡ್ಡದ ಮೇಲೆ ಭೂಮಿಗೆ ಏರುಮುಖವಾಗಿ ಉರುಳಿಸುವಾಗ ಸ್ವಲ್ಪ ಆಯ ತಪ್ಪಿದರು ಉಂಡೆ ಜಾರಿ ಉರುಳಿ ಹೋಗುತ್ತಿತ್ತು. ಅಡ್ಡಬರುತ್ತಿದ್ಗ ಒಂದೊಂದು ಸಣ್ಣ ಕಲ್ಲು ಬೃಹತ್ ಬಂಡೆಯಂತೆ ವರ್ತಿಸಿ ಹುಳುವಿನ ಕೆಲಸವನ್ನು ಇನ್ನಷ್ಟು ದುಸ್ಸಾದ್ಯವಾಗಿಸುತ್ತಿತ್ತು. ಇಷ್ಟಾದರೂ ಹುಳುವಿನ ಉತ್ಸಾಹ ಎಂದಿಗು ಕುಗ್ಗುತ್ತಿರಲಿಲ್ಲ.

ಒಂದು ದಿನ ಎಂದಿನಂತೆ ತುರಹಳ್ಳಿ ಕಾಡಿಗೆ ಭೇಟಿ ಕೊಟ್ಟಿದ್ದಾಗ ಆಗಷ್ಟೆ ಬಿದ್ದಿದ್ದ ಸಗಣಿಯನ್ನು ಕಂಡೆವು. ಅದರ ಮೇಲೆ ಎರಡು ಹುಳುಗಳು ಉಂಡೆಯನ್ನು ಕಟ್ಟುತ್ತಿದ್ದವು. ಅದುವರೆಗೂ ನಾವು ಸಗಣಿ ಓಡುಹುಳುಗಳು ಉಂಡೆಯನ್ನು ಕಟ್ಟುವುದನ್ನು ನೋಡಿರಲಿಲ್ಲ ಹಾಗಾಗಿ ಅದೇ ಹತ್ತಿರದಲ್ಲಿದ್ದ ಬಂಡೆಯ ಮೇಲೆ ಕುಳಿತು ಅದನ್ನು ನೋಡಲು ಶುರುಮಾಡಿದೆವು. ನಮ್ಮ ಹಾಗೆ ಅಲ್ಲಿ ಸೈಕ್ಲಿಂಗ್ಗೆಂದು ಬಂದ ಅನೇಕರು ಇದನ್ನು ಆಶ್ಚರ್ಯವಾಗಿ ಕಂಡು ಹೋಗುತ್ತಿದ್ದರು. ಆದರೆ ನಮ್ಮ ಗಮನವೆಲ್ಲ ಹುಳುಗಳ ಮೇಲೆ ಇತ್ತು. ಸ್ವಲ್ಪ ಸಮಯದಲ್ಲಿ ಆ ಎರಡು ಹುಳುಗಳು ಸೇರಿ ಉಂಡೆಯನ್ನು ಕಟ್ಟಿ ಬಿಟ್ಟವು. ಅದನ್ನು ಹಾಗೆ ಉರುಳಿಸಿಕೊಂಡು ಹೋಗತೊಡಗಿದವು. ಅದರ ಹಾದಿ ಸ್ವಲ್ಪ ಏರುಮುಖವಾಗಿದ್ದರಿಂದ ತುಂಬಾ ಪ್ರಯಾಸಪಟ್ಟು ಉರುಳಿಸುತ್ತಿದ್ದವು. ಸುಮಾರು ಐದು ನಿಮಿಷದಲ್ಲಿ ಒಂದಷ್ಟು ಎತ್ತರಕ್ಕೆ ಉಂಡೆಯನ್ನು ಉರುಳಿಸಿಕೊಂಡು ಹೋಗುವುದರಲ್ಲಿ ಅವೆರಡು ಯಶಸ್ವಿಯಾಗಿದ್ದವು. ಆದರೆ ಅದು ಎಲ್ಲಿತ್ತು ಏನೋ ಇದ್ದಕ್ಕಿದ್ದ ಹಾಗೆ ಇನ್ನೊಂದು ಸಗಣಿ ಓಡುಹುಳು ಪ್ರತ್ಯಕ್ಷವಾಗಿ ತುಂಬಾ ಕಷ್ಟಪಟ್ಟು ಉರುಳಿಸಿಕೊಂಡು ಹೋಗುತ್ತಿದ್ದ ಈ ಎರಡು ಸಗಣಿ ಓಡುಹುಳುಗಳ ಮೇಲೆ ಆಕ್ರಮಣ ಮಾಡಿತು. ಇದರಿಂದ ವಿಚಲಿತಗೊಂಡ ಅವೆರಡು ಹುಳುಗಳು ಅತಿಕ್ರಮಣಕಾರನ ಮೇಲೆ ಒಮ್ಮೆಲೆ ದಾಳಿಗೆ ಇಳಿದವು. ಆದರೆ ಈ ಗಲಿಬಿಲಿಯಲ್ಲಿ ತಾವು ಉರುಳಿಸಿಕೊಂಡು ಹೋಗುತ್ತಿದ್ದ ಉಂಡೆಯನ್ನು ಬಿಟ್ಟುಬಿಟ್ಟವು. ಮೊದಲೇ ಏರುಮುಖದಲ್ಲಿ ಹೋಗುತ್ತಿದ್ದ ಕಾರಣ ಉಂಡೆ ಉರುಳಿಕೊಂಡು ಕೆಳಗೆ ಹೋಗಲಾರಂಭಿಸಿತು. ಅಷ್ಟರಲ್ಲಿ ಇನ್ನೊಂದು ಓಡುಹುಳು ಉರುಳಿಕೊಂಡು ಹೋಗುತ್ತಿದ್ದ ಉಂಡೆಗೆ ಅಡ್ಡವಾಗಿ ಬಂದು ಅದನ್ನು ಹಿಡಿದುಕೊಂಡು ಬಿಟ್ಟಿತು. ಅನಂತರ ಇನ್ನೊಂದು ದಿಕ್ಕಿನಲ್ಲಿ ಉಂಡೆಯನ್ನು ಉರುಳಿಸಿಕೊಂಡು ಹೋಗಲು ಶುರು ಮಾಡಿತು. ಇತ್ತ ಅತಿಕ್ರಮಣಕಾರನೊಂದಿಗೆ ಹೋರಾಟ ಮಾಡುತ್ತಿದ್ದ ಓಡುಹುಳುಗಳು ಅತಿಕ್ರಮಣಕಾರನನ್ನು ಸೋಲಿಸಿ ಗೆದ್ದುಬಿಟ್ಟವು. ಅತಿಕ್ರಮಣಕಾರ ಓಡುಹುಳು ಎತ್ತವೋ ಓಡಿ ಕಣ್ಮರೆಯಾಗಿಬಿಟ್ಟಿತು. ತಾವು ಗೆದ್ದೆವು ಎಂದು ಬೀಗುತ್ತಾ ಬಂದ ಓಡುಹುಳುಗಳು ತಾವು ಮಾಡಿದ್ದ ಉಂಡೆಯನ್ನು ಹುಡುಕುತ್ತಿದ್ದವು. ಆದರೆ ಆದು ಅಲ್ಲಿ ಇರಲಿಲ್ಲ. ಅತಿಕ್ರಮಣಕಾರರ ಸೋಗಿನಲ್ಲಿ ಬಂದ ಇನ್ನೊಂದು ಹುಳುಗಳ ಜೋಡಿ ಈ ಜೋಡಿಗೆ ಮೋಸ ಮಾಡಿಬಿಟ್ಟಿತ್ತು.

ಅಲ್ಲಿಯವರೆಗೂ ಮೋಸ, ವಂಚನೆ, ದೌರ್ಜನ್ಯ ಇವೆಲ್ಲ ಮಾನವನ ಗುಣಗಳು ಎಂದು ಮಾತ್ರ ತಿಳಿದಿದ್ದ ನನಗೆ ಪ್ರಾಣಿ ಲೋಕದಲ್ಲಿ ಇದನ್ನು ಕಂಡು ಅಚ್ಚರಿಯಾಯಿತು. ಒತ್ತಡದ ಸನ್ನಿವೇಶಗಳಲ್ಲಿ ಎಲ್ಲಾ ಪ್ರಾಣಿಗಳು ಒಂದೇ ರೀತಿ ವರ್ತಿಸುತ್ತವೆ ಎಂದು ಮನದಟ್ಟಾಯಿತು.

ಹೀಗೆ ಉಂಡೆಯನ್ನು ಉರುಳಿಸಿಕೊಂಡು ಹೋಗುವ ಕೀಟಗಳು ಸ್ವಲ್ಪ ಮೆದು ನೆಲವನ್ನು ಕಂಡಾಗ ಉಂಡೆಯನ್ನು ಅಲ್ಲಿಯೇ ಹೂಳುವದಕ್ಕಾಗಿ ಗುಂಡಿಯನ್ನು ತೋಡುತ್ತವೆ. ಅನಂತರ ಗಂಡು-ಹೆಣ್ಣು ಎರಡು ಕೂಡುತ್ತವೆ. ಮೊಟ್ಟೆಯನ್ನು ಹೆಣ್ಣು ಸಗಣಿ ಉಂಡೆಯಲ್ಲಿ ಇರಿಸುತ್ತದೆ. ಕೆಲವು ಪ್ರಭೇದಗಳಲ್ಲಿ ಈ ಹಂತದಲ್ಲಿ ಗಂಡು-ಹೆಣ್ಣು ಅಲ್ಲಿಂದ ನಿರ್ಗಮಿಸುತ್ತವೆ. ಆದರೆ ಕೆಲವು ಪ್ರಭೇದಗಳಲ್ಲಿ ಗಂಡು-ಹೆಣ್ಣು ಎರಡು ತಮ್ಮ ಮರಿಗಳ ರಕ್ಷಣೆಗಾಗಿ ಕಾವಲು ನಿಲ್ಲುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ಸಗಣಿಯಲ್ಲಿ ಅಳಿದುಳಿದಿರುವ ವಸ್ತುಗಳೇ ಆಹಾರವಾಗುತ್ತವೆ. ಇದನ್ನು ತಿಂದು ಮರಿಗಳು ವಯಸ್ಕ ಕೀಟವಾಗಿ ಮಾರ್ಪಾಡಾಗುತ್ತದೆ.

ಸಗಣಿ ಓಡುಹುಳುಗಳಿಂದ ಪರಿಸರಕ್ಕಾಗುವ ಸಹಾಯ ಅಪಾರ. ಸಗಣಿ ಓಡುಹುಳುಗಳ ಇರುವಿಕೆ ಪರಿಸರದ ಸಮತೋಲನದ ಬಗ್ಗೆ ತೋರಿಸುತ್ತವೆ ಹಾಗಾಗಿ ಇವುಗಳನ್ನು ಜೈವಿಕ ಸೂಚಕಗಳು ಎಂದು ಪರಿಗಣಿಸಲಾಗಿದೆ. ಇವು ಈ ಮೊದಲೇ ತಿಳಿಸಿದಂತೆ ಆಹಾರ ಸರಪಳಿಯಲ್ಲಿ ಆಹಾರವನ್ನು ಮುರಿದು ಮತ್ತೆ ಪೋಷಕಾಂಶಗಳಾಗಿ ಮಾರ್ಪಡಿಸಿ ಪರಿಸರಕ್ಕೆ ಸೇರಿಸುತ್ತವೆ. ಇಷ್ಟೇ ಅಲ್ಲದೆ ಸಗಣಿಯಲ್ಲಿರುವ ಬೀಜಗಳ ಪ್ರಸರಣಕ್ಕೆ ಕಾರಣವಾಗುತ್ತವೆ. ಹೀಗಾಗಿ ಅರಣ್ಯಗಳಲ್ಲಿ ಮರಗಳ ಮತ್ತು ಗಿಡಗಳ ಬೀಜ ಪ್ರಸರಣ ಬಹು ದೂರದವರೆಗು ಯಶಸ್ವಿಯಾಗಿ ಆಗುತ್ತವೆ. ಹೈನುಗಾರಿಕೆಯಲ್ಲೂ ಇದರ ಪಾತ್ರ ಮಹತ್ವದ್ದಾಗಿದೆ ಸಗಣಿಯನ್ನು ಹಸುಗಳಿಂದ ತಕ್ಷಣವೇ ದೂರ ತೆಗೆದುಕೊಂಡು ಹೋಗುವ ಸಾಮರ್ಥ್ಯವಿರುವದರಿಂದ ಹಸುಗಳನ್ನು ಇತರ ಕೀಟಗಳಿಂದ ರಕ್ಷಿಸುತ್ತದೆ.



ಆಗಷ್ಟೆ ಬಿದ್ದಿದ್ದ ಸಗಣಿಯ ಮೇಲೆ ಎರಡು ಹುಳುಗಳು ಉಂಡೆಯನ್ನು ಕಟ್ಟುತ್ತಿದ್ದವು

ಸಗಣಿ ಓಡುಹುಳುಗಳ ಮೇಲೆ ಆಕ್ರಮಣ ನಡೆಯಿತು

ಅಡ್ಡಬರುತ್ತಿದ್ಗ ಒಂದೊಂದು ಸಣ್ಣ ಕಲ್ಲು ಬೃಹತ್ ಬಂಡೆಯಂತೆ ವರ್ತಿಸುತಿತ್ತು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.