ವಿಷಯಕ್ಕೆ ಹೋಗಿ

ಕಾಮನ್ ಬ್ಯಾಂಡೆಡ್ ಆಲ್ (Hasora chromus)

ಹೊಂಗೆ ಮರ ತನ್ನ ಎಲೆಗಳನ್ನು ಉದುರಿಸಿ ಮತ್ತೆ ಚಿಗುರುವುದನ್ನು ನೋಡಿದಾಗ ನನ್ನ ನೆನಪು ಏಳೆಂಟು ವರ್ಷಗಳ ಹಿಂದೆ ಸರಿಯುತ್ತದೆ. ನಾವು ಹೊಂಗೆ ಸಸಿಯನ್ನು ನೆಟ್ಟು ಎರಡು ಮೂರು ವರ್ಷವಾಗಿತ್ತು ಅದು ಸಣ್ಣ ಮರವಾಗಿ ಬೆಳೆದಿತ್ತು. ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಎಲೆಯುದುರಿಸಿ ಹೊಸ ಎಲೆಗಳನ್ನು ತಾಳುತಿತ್ತು. ಹೊಸ ಎಲೆಗಳು ಮೊದಲು ಕೆಂಪು ಬಣ್ಣದಲ್ಲಿದ್ದು ಬೆಳೆದಂತೆಲ್ಲ ತೆಳು ಹಸಿರು ಬಣ್ಣಕ್ಕೆ ತಿರುಗುತ್ತವೆ. ದೂರದಿಂದ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದಂತೆ ಮರದ ತುಂಬೆಲ್ಲ ಒಂದು ಚಿಟ್ಟೆಯ ಮರಿಗಳು ಕಾಣಿಸಿಕೊಂಡವು.

ಇವು ಯಾವ ಪರಿ ಹಸಿದಿದ್ದವು ಎಂದರೆ, ಪುರಾಣದ ವೃಕೋದರ, ಘಟೋತ್ಕಚರೆಲ್ಲ ನೆನಪಾದರು. ಮರಿಗಳು ಬೆಳೆದಂತೆ ನಮಗೆ ಅವುಗಳ ನಿಜವಾದ ಸಂಖ್ಯೆ ಗೊತ್ತಾಗಿದ್ದು. ನೂರಾರು ಸಂಖ್ಯೆಯಲ್ಲಿದ್ದ ಇವು ಎಲೆಗಳನ್ನು ಭಕ್ಷಿಸಿ ಮರ ಕೇವಲ ಕೊಂಬೆ ಮತ್ತು ಕಡ್ಡಿಗಳನ್ನು ಮಾತ್ರ ಹೊಂದುವಂತೆ ಮಾಡಿದ್ದವು. ಇದನ್ನೆಲ್ಲ ನೋಡಿದ ಜನರು ಮರಕ್ಕೆ ಯಾವುದೋ ಕಾಯಿಲೆ ಬಂದಿದೆ ಎಂದು ಮಾತಾನಾಡಿಕೊಳ್ಳುತ್ತಿದ್ದರು.

ಕಾಮನ್ ಬ್ಯಾಂಡೆಡ್ ಆಲ್


ಕ್ರಮೇಣ ಈ ಮರಿಗಳು ಕಣ್ಮರೆಯಾದವು. ಹೊಂಗೆಯ ಎಲೆಗಳು ಪುನಃ ಚಿಗುರಲಾರಂಭಿಸಿದವು. ಅವು ಸ್ವಲ್ಪ ದೊಡ್ಡದಾಗುವಷ್ಟರಲ್ಲಿ ಅದರ ಮೇಲೆ ಚಿಟ್ಟೆಯೊಂದು ಮೊಟ್ಟೆ ಇಡುವದನ್ನು ಕಂಡೆ. ಅದು ಕಾಮನ್ ಬ್ಯಾಂಡೆಡ್ ಆಲ್ (Hasora chromus) ಎನ್ನುವ ಚಿಟ್ಟೆಯಾಗಿತ್ತು

ಕಾಮನ್ ಬ್ಯಾಂಡೆಡ್ ಆಲ್, ಹೆಸ್ಪೆರಿಡೇ ಎನ್ನುವ ಕುಟುಂಬಕ್ಕೆ ಸೇರುತ್ತದೆ. ಭಾರತ ಉಪಖಂಡ, ಆಗ್ನೇಯೇಷ್ಯ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡು ಬರುತ್ತವೆ. ಇವು ಸ್ಕಿಪ್ಪರ್ಸ್ ನ ಕೋಲಿಯಡಿನೆ ಉಪಕುಟುಂಬಕ್ಕೆ ವರ್ಗೀಕರಿಸಲಾಗಿದೆ. ಸ್ಕಿಪ್ಪರ್ಸ್ ಚಿಕ್ಕಗಾತ್ರದ ಚಿಟ್ಟೆಗಳು.
ಕಿಪ್ಪರ್ಸ್ ಚಿಕ್ಕಗಾತ್ರದ ಚಿಟ್ಟೆಗಳು


ಇವು ಹೊಸ ಚಿಗುರು ಮೇಲೆ ಮೊಟ್ಟೆಯಿರಿಸುತ್ತದೆ. ಮೊಟ್ಟೆ ಯಿಂದ ಹೊರಬಂದ ಮರಿಗಳು ಈ ಎಲೆಗಳನ್ನು ತಿಂದು ಬೆಳೆಯುತ್ತದೆ. ಕ್ಯಾಟರ್ ಪಿಲ್ಲರ್, ಮೇಲ್ಮೈಬಣ್ಣ ಕಪ್ಪಗಿದ್ದು ಉದ್ದಕ್ಕೆ ಹಳದಿ ಗೀರುಗಳಿರುತ್ತವೆ. ಪಕ್ಕೆಗಳು ಕಂದು ಬಣ್ಣ ವನ್ನು ಹೊಂದಿರುತ್ತವೆ. ತಲೆಯ ಬಣ್ಣ ಕೆಂಪು. ಇವು ತಮ್ಮ ಪ್ಯೂಪ ಅವಸ್ಥೆಯನ್ನು ದಾಟಿ ವಯಸ್ಕ ಕೀಟವಾಗುತ್ತದೆ.


ಎರಡನೇ ಬಾರಿ ಮೊಟ್ಟೆಯಿಂದ ಬಂದ ಮರಿಗಳು ಸಹ, ಆಗಷ್ಟೇ ಚಿಗುರುತ್ತಿದ್ದ ಎಲೆಗಳನ್ನು ಸಂಪೂರ್ಣವಾಗಿ ಭಕ್ಷಿಸಿದವು. ನೆಲದ ಮೇಲೆಲ್ಲಾ ಅವುಗಳ ಹಿಕ್ಕೆ ಬಿದ್ದಿತ್ತು. ಒಂದೆರಡು ಕ್ಷಣ ಆ ಮರದ ಕೆಳಗೆ ನಿಂತಿದ್ದರು ಸಾಕು ನಮ್ಮ ಮೇಲೂ ಹಿಕ್ಕೆಗಳು ಬಿದ್ದು ಹುಳುಗಳು ಮೈ ಮೇಲೆ ಹತ್ತಿ ಬಿಡುತ್ತಿದ್ದವು. ಜನಗಳಿಗೆ ಇದು ಗಾಬರಿ ಹುಟ್ಟಿಸಿತು. ಆಗ ಚಂಡಮಾರುತ ಅಪ್ಪಳಿಸಿತ್ತು ಎಲೆಗಳು ಚಿಗುರುತ್ತಿದ್ದರೆ ಈ ಹುಳುಗಳಿಗೆ ಹಬ್ಬ. ನನಗೆ ಆಶ್ಚರ್ಯವಾಗಿದ್ದೆಂದರೆ ಇವುಗಳಿಗೆ ಯಾವುದೆ ಸ್ವಾಭಾವಿಕ ಬೇಟೆಗಾರರಿಲ್ಲದಿರುವುದು. ಕೆಲವೊಮ್ಮೆ ಮಾತ್ರ ಕಾಗೆಗಳು ಇವುಗಳನ್ನು ಹೆಕ್ಕಿ ತಿನ್ನುತ್ತಿದ್ದವು. ಬಹುಶಃ ಇದು ಬೆಂಗಳೂರು ತನ್ನ ಜೀವಜಾಲವನ್ನು ಕಳೆದುಕೊಂಡಿರುವ ಪರಿಣಾಮವಿರಬಹುದೆ? ಮೂರನೆ ಬಾರಿ ಸಹ ಚಿಟ್ಟೆ ಮೊಟ್ಟೆ ಇಡುವದನ್ನು ಕಂಡೆ. ಆದರೆ ಈ ಬಾರಿ ಮೊದಲಿನಷ್ಟು ಸಂಖ್ಯೆಯಲಿ ಮರಿಗಳು ಇರಲಿಲ್ಲ. ಮರು ವರ್ಷ ಸಹ ಇದು ಪುನರಾವರ್ತನೆ ಆಯಿತು ಆದರೆ ಹಿಂದಿನ ವರ್ಷದಂತೆ ಹೆಚ್ಚು ಸಂಖ್ಯೆಯಲ್ಲಿ ಅಲ್ಲ. ಆನಂತರ ಇದು ನಿಂತು ಹೋಯಿತು.


ಕಡ್ಡಿಗಳನ್ನು ಮಾತ್ರ ಹೊಂದುವಂತೆ ಮಾಡಿದ್ದವು


ಈಗಲು ಕಾಮನ್ ಬ್ಯಾಂಡೆಡ್ ಆಲ್ ಚಿಟ್ಟೆ ಹೊಂಗೆ ಮರಕ್ಕೆ ಬಂದು ಮೊಟ್ಟೆಯಿಡುವದನ್ನು ನೋಡುತ್ತೇನೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮರಿಗಳು ಕಾಣಿಸುವುದಿಲ್ಲ.

ಸಾಮಾನ್ಯವಾಗಿ ಕಾಮನ್ ಬ್ಯಾಂಡೆಡ್ ಆಲ್ ಹೊಂಗೆ ಮರಕ್ಕೆ ದಾಳಿಯಿಟ್ಟಾಗ, ಜನ ಹೆದರಿಕೆಯಿಂದ ಅವನ್ನು ಕೊಲ್ಲಲು ಕೀಟನಾಶಕವನ್ನು ಉಪಯೋಗಿಸುತ್ತಾರೆ. ಆದರೆ ಇದರಿಂದ ಪರಿಸರದ ಸಮತೋಲನ ಕೆಡುತ್ತದೆ. ನಮಗೆ ಈ ಚಿಟ್ಟೆಯಿಂದ ಯಾವುದೆ ತೊಂದರೆ ಇಲ್ಲ. ಹಾಗಾಗಿ ಅವುಗಳ ಪಾಡಿಗೆ ಅವನ್ನು ಬಿಡುವುದು ಒಳ್ಳೆಯದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.