ವಿಷಯಕ್ಕೆ ಹೋಗಿ

ಹಂತಕ


ಮಾನವ ತನ್ನ ಬುದ್ಧಿಮತ್ತೆಯಿಂದ ಪ್ರಕೃತಿಯ ಮೇಲೆ ಒಂದು ರೀತಿಯ ಹಿಡಿತ ಸಾಧಿಸಿದ್ದಾನೆ. ಆದರೆ ಪ್ರಕೃತಿಯನ್ನು ಸಂಪೂರ್ಣವಾಗಿ ಗೆಲ್ಲಲಾಗಿಲ್ಲ. ಮಾನವ ಪ್ರಕೃತಿಯನ್ನು ಎಷ್ಟೇ ದಮನ ಮಾಡಲು ಯತ್ನಿಸಿದರು ಅದು ಮತ್ತೆ ಎದ್ದು ನಿಲ್ಲುತ್ತದೆ. ನಾವು ಸಹಜವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಏನನ್ನಾದರು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿರುತ್ತೇವೆ. ಮೇಲ್ನೋಟಕ್ಕೆ ಇದು ಆ ಪರಿಸರದಲ್ಲಿನ ಜೀವಿಗಳಿಗೆ ಮಾರಕವಾಗಿ ಕಂಡುಬಂದರು, ಕಾಲ ಕಳೆದಂತೆ ಆ ಬದಲಾವಣೆಗೆ ಹೊಂದಿಕೊಳ್ಳಲು ಜೀವಿಗಳು ಯತ್ನಿಸುತ್ತವೆ ಮತ್ತು ಬಹುತೇಕ ಯಶಸ್ವಿಯಾಗುತ್ತವೆ.


ಇದನ್ನೆಲ್ಲ ಏಕೆ ಇಲ್ಲಿ ಬರೆದೆನೆಂದರೆ, ನಾವು ಮಾಡಿದ ಒಂದು ಚಿಕ್ಕ ಬದಲಾವಣೆಯಿಂದ ಒಂದು ಕೀಟದ ಪರಿಚಯವಾಗಿದ್ದಕ್ಕೆ. ನಾನು ತಂದು ನೆಟ್ಟಿದ್ದ ಪಾರಿಜಾತ ಗಿಡ ಎರಡು ಮೂರು ವರ್ಷಗಳಲ್ಲಿ ದೊಡ್ಡದಾಗಿ ಬೆಳೆದು ಅದರ ಕೊಂಬೆಗಳೆಲ್ಲ ದಾರಿಗೆ ಅಡ್ಡವಾಗಿ ಹಬ್ಬಿದ್ದವು. ಇದಕ್ಕಾಗಿ ನನ್ನ ತಂದೆ ಒಂದು ಟ್ವೈನ್ ದಾರದಿಂದ ಕೊಂಬೆಗಳನೆಲ್ಲ ಬಿಗಿದು ದಾರದ ಇನ್ನೊಂದು ತುದಿಯನ್ನು ಒಂದು ಕಂಬಕ್ಕೆ ಕಟ್ಟಿದ್ದರು. ಇದರ ಮಾರನೆ ದಿನ ಆ ಕಿರು ತೋಟಕ್ಕೆ ಹೋದಾಗ ದಾರದ ಮೇಲೆ ಏನೋ ಗಂಟಿನ ರೀತಿ ದೂರದಿಂದ ಕಾಣಿಸಿತು. ಕುತೂಹಲದಿಂದ ಹತ್ತಿರದಿಂದ ಪರೀಕ್ಷಿಸೋಣವೆಂದು ಹೋದೆ. ಆಶ್ಚರ್ಯವೆಂದರೆ ಅದೊಂದು ಕೀಟವಾಗಿತ್ತು. ದಾರದ ಬಣ್ಣ ಮತ್ತು ಕೀಟದ ಬಣ್ಣ ಒಂದೇ ಆದ್ದರಿಂದ ದೂರದಿಂದ ನನಗೆ ಅದನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅದಕ್ಕಿಂತ ಆಶ್ಚರ್ಯವಾಗಿದ್ದು ನಾನು ಆ ಕೀಟವನ್ನು ನೋಡುತ್ತಿದಿದ್ದು ಅದೇ ಮೊದಲ ಬಾರಿಯಾಗಿತ್ತು. ನೋಡಲು ಸ್ವಲ್ಪ ವಿಚಿತ್ರವಾಗಿದ್ದ ಆ ಕೀಟ ಯಾವುದೆಂದು ತಿಳಿಯಲಿಲ್ಲ. ಇರಲಿ ಎಂದು ಒಂದೆರಡು ಫೋಟೊ ಕ್ಲಿಕ್ಕಿಸಿ ಇಟ್ಟುಕೊಂಡೆ.

ಇದಾದ ನಂತರ ಇದರ ಬಗ್ಗೆ ನನಗೆ ಸಂಪೂರ್ಣವಾಗಿ ಮರೆತೇಹೋಯ್ತು. ಅಲ್ಲದೆ ಕೀಟಗಳನ್ನು ಪತ್ತೆ ಮಾಡುವುದು ಅಷ್ಟು ಸುಲಭವಲ್ಲ ಏಕೆಂದರೆ ಅದರ ಬಗ್ಗೆ ಮಾಹಿತಿ ತುಂಬಾ ವಿರಳ. ಇತ್ತೀಚೆಗೆ ಆಕಸ್ಮಿಕವಾಗಿ ಈ ಕೀಟದ ಬಗ್ಗೆ ಮಾಹಿತಿ ಸಿಕ್ಕಿತು. ಓದುತ್ತ ಈ ಕೀಟದ ಕುತುಹಲಕಾರಿ ಅಂಶಗಳು ತಿಳಿದು ಬಂತು.

ಈ ಕೀಟಕ್ಕೆ ಇಂಗ್ಲಿಷ್ ನಲ್ಲಿ ಅಸಾಸಿನ್ ಬಗ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವು ಹಂತಕ ಕೀಟ ಎಂದು ಕರೆಯಬಹುದು. ಹಂತಕ ಕೀಟ ರೆಡುವೀಡೆ ಕುಟುಂಬಕ್ಕೆ ಸೇರುತ್ತದೆ. ಈ ಕುಟುಂಬದ ಬಹುತೇಕ ಸದಸ್ಯರು ಬೇಟೆಗಾರರು. ಆದರೆ ಕೆಲವು ರಕ್ತವನ್ನು ಹೀರಿ ಕುಡಿಯುವ ಕೀಟಗಳು ಇವೆ.

ಹಂತಕ ನೋಡಲು ಸ್ವಲ್ಪ ವಿಚಿತ್ರವಾಗಿರುತ್ತದೆ. ಇವು ಸಾಮಾನ್ಯವಾಗಿ ಕೆಂಪು, ಕಂದು ಮತ್ತು ಕಪ್ಪು ಬಣ್ಣದಲ್ಲಿ ಇರುತ್ತವೆ. ಇವುಗಳಿಗೆ ತಲೆ ಉದ್ದಕ್ಕಿದ್ದು ಕತ್ತಿನ ಭಾಗ ಕಿರಿದಾಗಿರುತ್ತದೆ. ಕಾಲುಗಳು ಉದ್ದಕ್ಕಿರುತ್ತವೆ. ಇದರ ಪ್ರಮುಖ ಆಕರ್ಷಣೆಯೆಂದರೆ ಅದು ಸೊಂಡಿ. ಈ ಸೊಂಡಿಯನ್ನು ತನ್ನ ಮಧ್ಯಭಾಗದಲ್ಲಿರುವ ತೋಡಿನಲ್ಲಿ ಇರಿಸಿಕೊಂಡಿರುತ್ತದೆ. ಇದೇ ಸೊಂಡಿಯನ್ನು ತೋಡಿನಲ್ಲಿರುವ ಏಣುಗಳನ್ನು ಉಜ್ಜಿ ಶಬ್ದವನ್ನು ಮಾಡುತ್ತವೆ. ಸೊಂಡಿಯ ಪ್ರಮುಖ ಉಪಯೋಗವೆಂದರೆ ಬೇಟೆ ಪ್ರಾಣಿಯನ್ನು ಸಾಯಿಸುವುದರಲ್ಲಿ. ಸೊಂಡಿಯ ಮೂಲಕ ಬೇಟೆ ಪ್ರಾಣಿಯ ದೇಹಕ್ಕೆ ವಿಷಮಯ ದ್ರವವನ್ನು ಸೇರಿಸುತ್ತದೆ. ಈ ವಿಷ ಬೇಟೆಯನ್ನು ಸಾಯಿಸುವುದಲ್ಲದೆ ಬೇಟೆ ಪ್ರಾಣಿಯ ದೇಹದ ಒಳ ಭಾಗವನ್ನು ದ್ರವೀಕರಿಸಿ ಹಂತಕ ಕೀಟಕ್ಕೆ ಹೀರಲು ಅನುಕೂಲ ಮಾಡಿಕೊಡುತ್ತದೆ. ಹಂತಕ ಕೀಟ ತನ್ನ ವಿಷದಿಂದ ತನಗಿಂತ ದೊಡ್ಜದಾದ ಪ್ರಾಣಿಗಳನ್ನು ಬೇಟೆಯಾಡಬಹುದು.
ಹಂತಕ ಕೀಟದ ಕಾಲುಗಳಲ್ಲಿ ಸಣ್ಣ ಕೂದಲುಗಳು ಇರುತ್ತವೆ. ಇದು ತನ್ನ ಬೇಟೆಯನ್ನು ಭದ್ರವಾಗಿ ಹಿಡಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಕೀಟಕ್ಕೇನಾದರು ಶತ್ರುಗಳು ಎದುರಾದರೆ, ಮೊದಲು ತನ್ನ ಸೊಂಡಿಯ ಸಹಾಯದಿಂದ ಕರ್ಕಶವಾದ ಶಬ್ದವನ್ನು ಹೊಮ್ಮಿಸುತ್ತದೆ. ಅದಕ್ಕೂ ಶತ್ರು ಬಗ್ಗಲಿಲ್ಲವೆಂದರೆ ತನ್ನ ಸೊಂಡಿಯಿಂದ ಚುಚ್ಚಿ ತಪ್ಪಿಸಿಕೊಳ್ಳುತ್ತದೆ.
ನಿಮಗೇನಾದರು ಹಂತಕ ಕೀಟ ಕಂಡರೆ ಅದನ್ನು ಕೈಯಿಂದ ಮುಟ್ಟಬೇಡಿ. ಅದರ ಕಡಿತ ನೋವಿನಿಂದ ಕೂಡಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.