ಹೂವುಗಳು ಗೊಂಚಲಾಗಿ, ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ. |
ಹೊಳೆ ದಾಸವಾಳ ಸುಂದರವಾದ ಹೂವುಗಳನ್ನು ತಳೆಯುವ ಮರ. ಇದು ಭಾರತ, ಬಾಂಗ್ಲಾದೇಶ, ಚೈನ, ಥಾಯ್ಲೆಂಡ್, ಶ್ರೀಲಂಕಾ, ಮಲೇಶಿಯಾ ಇನ್ನು ಮುಂತಾದ ಆಗ್ನೇಯ ಏಶಿಯದ ದೇಶಗಳಲ್ಲಿ ಕಂಡುಬರುತ್ತದೆ.
ಇದರ ಕನ್ನಡದ ಮತ್ತೊಂದು ಹೆಸರು ಹೊಳೆ ಮತ್ತಿ. ಇದಕ್ಕೆ ಇಂಗ್ಲೀಷ್‌ನಲ್ಲಿ ಕ್ವೀನ್ಸ್ ಪ್ಲವರ್, ಕ್ವೀನ್ ಆಫ್ ಪ್ಲವರ್, ಕ್ವೀನ್ ಕ್ರೇಪ್ ಮೈರ್ಟಲ್ ಮತ್ತು ಪ್ರೈಡ್ ಆಫ್ ಇಂಡಿಯಾ ಎಂಬ ಹೆಸರಿವೆ. ಹಿಂದಿಯಲ್ಲಿ ಇದರ ಹೆಸರು "ಜರುಲ್". ಇದರ ವೈಜ್ಞಾನಿಕ ಹೆಸರು "ಲ್ಯಾಗರ್ಸ್ಟ್ರೋಮಿಯ ಸ್ಪೀಸಿಯೋಸ". ಇದು ಮಹಾರಾಷ್ಟ್ರದ ರಾಜ್ಯ ಪುಷ್ಪ.

ತೊಗಟೆಯಲ್ಲಿ ಸಣ್ಣ ಬಿರುಕುಗಳು ಉಂಟಾಗಿರುತ್ತದೆ.
ಹೊಳೆ ದಾಸವಾಳ ಮಧ್ಯಮ ಗಾತ್ರದ ಅಂದರೆ ಸುಮಾರು ೪೦ ಮೀ. ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಈ ಮರ ಬೆಳೆಯುವುದು ತುಂಬಾ ನಿಧಾನ. ನೀರಿನ ಹರಿವಿರುವ ಕಡೆ ಇದು ವೇಗ ಮತ್ತು ಎತ್ತರವಾಗಿ ಬೆಳೆಯುತ್ತದೆ. ಆದರೆ ಒಣ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತಗೊಂಡು ಕುಬ್ಜವಾಗಿರುತ್ತದೆ. ಹೊಳೆ ದಾಸವಾಳ ಎಲೆಯುದುರಿಸುವ ಮರ. ಇದರ ತೊಗಟೆ ಬೂದು ಬಣ್ಣದಾಗಿದ್ದು ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಎಲೆಗಳು ಸರಳವಾಗಿದ್ದು ಉದ್ದಕೆ ದೀರ್ಘವೃತ್ತಾಕಾರವಾಗಿರುತ್ತದೆ. ಇದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ನಲ್ಲಿ ಹೂ ತಳೆಯುತ್ತದೆ. ಇದರ ಹೂವುಗಳು ಗೊಂಚಲಾಗಿ, ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ. ಮೊದಲಿಗೆ ಗೊಂಚಲಿನ ಬುಡದಲ್ಲಿ ಹೂ ಅರಳುತ್ತದೆ. ಅನಂತರ ಕ್ರಮೇಣವಾಗಿ ಮೇಲ್ಭಾಗದಲ್ಲಿ ಅರಳುತ್ತದೆ. ಹೂವು ಹಳೆಯದಾಗುತ್ತ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರ ಎಸಳುಗಳು ನೋಡಲು ಪೇಪರ್ ನನ್ನು ಹೋಲುವುದರಿಂದ ಇದಕ್ಕೆ ಕ್ರೇಪ್ ಎಂಬ ಹೆಸರು ಬಂದಿದೆ.
ಸರಳವಾದ ಎಲೆಗಳು
ಹೊಳೆ ದಾಸವಾಳದ ಕಾಯಿ ಮೊದಲಿಗೆ ಹಸುರು ಬಣ್ಣದಾಗಿದ್ದು ಅನಂತರ ಕಂದು ಮತ್ತು ಕಡೆಯಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕಾಯಿ ಸಂಪೂರ್ಣವಾಗಿ ಹಣ್ಣಾದ ನಂತರ ತನ್ನಷ್ಟಕ್ಕೆ ಒಡೆಯುತ್ತದೆ. ಹೊಳೆ ದಾಸವಾಳದ ಬೀಜ ಚಪ್ಪಟೆಯಾಗಿ ತ್ರಿಕೋಣಾಕಾರದಲ್ಲಿದ್ದು ಬಾಲವನ್ನು ಸಹ ಹೊಂದಿರುತ್ತದೆ. ಈ ಬಾಲ ಬೀಜವನ್ನು ಗಾಳಿಯಲ್ಲಿ ಅಥವ ನೀರಿನಲ್ಲಿ ತೇಲುವಂತೆ ಮಾಡುತ್ತದೆ. ಇದರಿಂದ ಬೀಜ ಪ್ರಸರಣ ಬಹು ದೂರದವರೆಗು ಆಗುತ್ತದೆ.
ಕಾಯಿಯ ಬಣ್ಣ ಮೊದಲಿಗೆ ಹಸುರು.
ಹೊಳೆ ದಾಸವಾಳ ಕೇವಲ ಅಲಂಕಾರಿಕ ಮರವಾಗಿರದೆ ಮಾನವನಿಗೆ ಅತ್ಯಂತ ಉಪಯುಕ್ತವು ಆಗಿದೆ. ಈ ಮರ ಬಾಳಿಕೆಯಲ್ಲಿ ತೇಗದ ನಂತರದ ಸ್ಥಾನವನ್ನು ಪಡೆದಿದೆ. ಹೀಗಾಗಿ ಈ ಮರವನ್ನು ರೈಲ್ವೇ ಸ್ಲೀಪರುಗಳಿಗಾಗಿ, ಪೀಠೋಪಕರಣ ಮತ್ತು ತಳ್ಳುಗಾಡಿ ತಯಾರಿಸುವಲ್ಲಿ ಉಪಯೋಗಿಸಲಾಗುತ್ತಿದೆ.

ಬೀಜ ಚಪ್ಪಟೆಯಾಗಿ ತ್ರಿಕೋಣಾಕಾರದಲ್ಲಿದ್ದು ಬಾಲವನ್ನು ಸಹ ಹೊಂದಿರುತ್ತದೆ
ವೈದ್ಯ ಪದ್ಧತಿಯಲ್ಲು ಇದರ ಬಳಕೆ ಉಂಟು, ಈ ಮರದ ಎಲೆಗಳನ್ನು ಮಧುಮೇಹ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಬಳಸಲಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ