ಒಂದು ದಿನ ನಾನು ಆಫೀಸಿನಿಂದ ಕೆಲಸ ಮುಗಿಸಿಕೊಂಡು ಮನೆಗೆ ಸೈಕಲಿನಲ್ಲಿ ಬರುತ್ತಿದ್ದೆ. ನಮ್ಮ ಮನೆಯ ಸಮೀಪವಿರುವ ಗೌಡನ ಕೆರೆಯ ಬಳಿ ಬರುವಾಗ ನನಗೆ ಸಣ್ಣ ಹಾವೊಂದು ರಸ್ತೆ ದಾಟುತ್ತಿದ್ದದ್ದು ಕಂಡುಬಂತು. ಕೆಲವೇ ಕ್ಷಣಗಳಷ್ಟೆ,
ಆ ಕಡೆಯಿಂದ ರಭಸವಾಗಿ ಬರುತ್ತಿದ್ದ ಕಾರೊಂದು ಆ ಹಾವಿನ ಮೇಲೆ ಹಾದುಹೋಯಿತು. ತಕ್ಷಣವೆ ಹಾವು ನಿಶ್ಚಲವಾಯಿತು. ನಾನು ಏನಾಗಿರಬಹುದೆಂದು ಹತ್ತಿರ ಹೋಗಿ ನೋಡಿದೆ. ಹಾವು ಕುಟುಕು ಜೀವವಾಗಿತ್ತು ಮತ್ತು ಒಂದೆರಡು ನಿಮಿಷಗಳಲ್ಲಿ ಪ್ರಾಣಬಿಟ್ಟಿತು.
ಆ ಕಡೆಯಿಂದ ರಭಸವಾಗಿ ಬರುತ್ತಿದ್ದ ಕಾರೊಂದು ಆ ಹಾವಿನ ಮೇಲೆ ಹಾದುಹೋಯಿತು. ತಕ್ಷಣವೆ ಹಾವು ನಿಶ್ಚಲವಾಯಿತು. ನಾನು ಏನಾಗಿರಬಹುದೆಂದು ಹತ್ತಿರ ಹೋಗಿ ನೋಡಿದೆ. ಹಾವು ಕುಟುಕು ಜೀವವಾಗಿತ್ತು ಮತ್ತು ಒಂದೆರಡು ನಿಮಿಷಗಳಲ್ಲಿ ಪ್ರಾಣಬಿಟ್ಟಿತು.
ಅದು ಕೊಳಕುಮಂಡಲ! ಆ ಜಾತಿಯ ಹಾವನ್ನು ನೈಸರ್ಗಿಕವಾಗಿ ಅದೇ ಮೊದಲ ಬಾರಿ ನಾನು ನೋಡಿದ್ದು. ನಮ್ಮ ಮನೆಯ ಬಳಿ ನಾಗರ, ಕೇರೆ ಹಾವನ್ನು ಮಾತ್ರ ನೋಡಿದ್ದ ನನಗೆ, ಆಶ್ಚರ್ಯ ಅದರ ಹಿಂದೆ ದುಃಖವು ಆಯಿತು.
ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ನಾವು (ಗೌತಮ, ಶ್ರೀಕಾಂತ, ಕೇಶವ) ೨೦೧೧ರ ಮಾರ್ಚ್ ತಿಂಗಳಿನಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿದ್ದೆವು. ಮರಳಿ ಬರುತ್ತಿರಬೇಕಾದರೆ ಕೊಳ್ಳೆಗಾಲದ ನಂತರ ಒಂದು ಹಳ್ಳಿಯ ಬಳಿ ಇದ್ದಕ್ಕಿದ್ದಂತೆ ಎರಡು ಮುಂಗುಸಿಗಳು, ರಸ್ತೆಯ ಅಂಚಿನಲ್ಲಿ ಕಾಣಿಸಿದವು. ರಸ್ತೆ ದಾಟಲು ಹವಣಿಸುತ್ತಿದ್ದ ಅವು ನಮ್ಮ ಕಾರನ್ನು ಕಂಡವು. ಒಂದು ಮುಂಗುಸಿಯೇನೊ ಅಲ್ಲೆ ನಿಂತು ಬಿಟ್ಟಿತು ಆದರೆ ಇನ್ನೊಂದು ರಸ್ತೆಯ ಮೇಲೆ ಓಡಲಾರಂಭಿಸಿತು. ಸಕಾಲದಲ್ಲಿ ವಾಹನವನ್ನು ಗೌತಮ ನಿಧಾನಗೊಳಿಸಿದ್ದರಿಂದ, ಆ ಮುಂಗುಸಿಯ ಜೀವ ಅಂದು ಉಳಿಯಿತು.

ಕಳೆದ ಒಂದೆರಡು ದಶಕದಲ್ಲಿ, ನಮ್ಮ ಜನಸಂಖ್ಯೆ ವಿಪರೀತ ಹೆಚ್ಚಿದೆ. ಮನುಷ್ಯನ ಆಧುನಿಕ ಜೀವನಶೈಲಿ ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆಯನ್ನು ಕೇಳುತ್ತದೆ. ಮಹಾನಗರಗಳು ವಿಸ್ತರಿಸಿದಂತೆಲ್ಲ, ಪರಿಸರ ದೂರ ಹೋಗಿ, ಪರಿಸರದ ವಸ್ತುಗಳು ದೂರದ ಪ್ರದೇಶಗಳಿಂದ ಪೂರೈಕೆಯಾಗುತ್ತದೆ (ಆಹಾರ, ನೀರು ಮುಂತಾದವು). ಅಲ್ಲದೆ ನಗರವಾಸಿಗಳು ವೀಕೆಂಡ್ ಗಳಂದು ತಮ್ಮ ಊರುಗಳಿಗೆ ಅಥವಾ ಬೇಸರ ಕಳೆಯಲು ಎಲ್ಲಾದರು ಹೋಗಲೇಬೇಕು. ಇದೆಲ್ಲದರ ದುಷ್ಪರಿಣಾಮ ವನ್ಯಜೀವಿಗಳ ಮೇಲಾಗುತ್ತಿದೆ.
ನಮ್ಮ ರಕ್ಷಿತಾರಣ್ಯಗಳು ಇದರಿಂದ ಹೊರತಾಗಿಲ್ಲ. ಅನೇಕ ರಾಷ್ಟ್ರೀಯ ಹೆದ್ದಾರಿಗಳು ರಕ್ಷಿತಾರಣ್ಯಗಳ ಮೂಲಕವೆ ಹೋಗುವುದು. ಇಲ್ಲಿ ದಿನದ ೨೪ ಗಂಟೆಯು ವಾಹನ ಸಂಚಾರವಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಬಂಡೀಪುರದಲ್ಲಿ ಪರ್ವ ಕಾಲದಲ್ಲಿ (Peak hours) ಪ್ರತಿ ಹತ್ತು ಸೆಕೆಂಡಿಗೊಂದು ವಾಹನ ಚಲಿಸುತ್ತಿತ್ತು. ವಾಹನ ದಟ್ಟಣೆ ಎಷ್ಟಿರ ಬಹುದೆಂದು ಊಹಿಸಿಕೊಳ್ಳಿ. ಇದರಿಂದಾಗಿ ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಸಾವಿಗೀಡಾಗುತ್ತವೆ.
೨೦೦೯ರಲ್ಲಿ ಕರ್ನಾಟಕ ಸರ್ಕಾರ, ರಾತ್ರಿಯ ವೇಳೆ ಬಂಡೀಪುರದಲ್ಲಿ ವಾಹನ ಸಂಚಾರ ನಿಲ್ಲಿಸಿತು. ಇದರ ನಂತರ ನಡೆಸಿದ ಸಮೀಕ್ಷೆಯಲ್ಲಿ, ರಾತ್ರಿಯ ವೇಳೆ ಕಾಡು ಪ್ರಾಣಿಗಳು ರಸ್ತೆ ಬದಿಯಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದದ್ದು ಕಂಡು ಬಂತು. ಹೀಗಾಗಿ ಕಾಡಿನಲ್ಲಿ ವಾಹನ ಸಂಚಾರ ತಡೆ ಅನಿವಾರ್ಯವಾಗಿದೆ. ಸ್ವಲ್ಪ ಬಳಸು ಮಾರ್ಗವಾದರು, ಅಗತ್ಯವಿದ್ದವರು, ಕಾಡಿನ ಹೊರಗಿರುವ ದಾರಿಯನ್ನು ಹಿಡಿಯುವುದು ಉತ್ತಮ. ಇದರಿಂದಾಗಿ ವನ್ಯಸಂಕುಲಕ್ಕೆ ಮಹೋಪಕಾರ ಮಾಡಿದಂತಾಗುತ್ತದೆ.
ನಾವು ಸಹ ನಮ್ಮ ಸ್ವಂತ ವಾಹನದಲ್ಲಿ ಅನಗತ್ಯವಾಗಿ ಅಡ್ಡಾಡುವುದನ್ನು ಕಡಿಮೆಗೊಳಿಸಿದರೆ, ನಮ್ಮ ಅರಿವಿಗೆ ಬಾರದೆ ನಮ್ಮಿಂದ ಸಾಯಬಹುದಾದ ಅನೇಕ ವನ್ಯಪ್ರಾಣಿಗಳನ್ನು ಉಳಿಸಬಹುದು. ಇದು ನಮ್ಮಿಂದ ಸಾಧ್ಯವೆ?
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ